ಗುರುವಾರ, ಏಪ್ರಿಲ್ 13, 2017

ಕಿರುತೆರೆಯ ಕಲ್ಯಾಣೋತ್ಸವ


ಇಂದು ಕಿರುತೆರೆಯ ಧಾರಾವಾಹಿಗಳು ಸಿನಿಮಾ ಜಗತ್ತಿಗೇ ಸ್ಪರ್ಧೆಯನ್ನು ಒಡ್ಡಿರುವುದು ಸುಸ್ಪಷ್ಟಕೆಲ ಸೀರಿಯಲ್ ಗಳು ಜನಪ್ರಿಯತೆಯಲ್ಲಿ ಚಲನಚಿತ್ರಗಳನ್ನೇ ಮೀರಿಸಿರುವುದೂ ಸುಳ್ಳಲ್ಲನಿತ್ಯದ ಕ್ಲೀಷೆಗಳಲ್ಲೇ ಇನ್ನೂ ಸುತ್ತುತ್ತಿರುವ ಆಪಾದನೆ ಇದ್ದರೂ ಕೂಡಅಪಾರ ಜನಸ್ತೋಮ –ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಧಾರಾವಾಹಿಗಳ ವೀಕ್ಷಣೆಯಲ್ಲಿ ತೊಡಗಿರುವುದಂತೂ ಸತ್ಯಚಾನಲ್ ಗಳ ರೇಟಿಂಗ್ ಗಳನ್ನು ಗಮನಿಸಿದಾಗ ಇದಂತೂ ಅರಿವಾಗುತ್ತದೆಕಳೆದೊಂದು ದಶಕದಲ್ಲಿ ಸೀರಿಯಲ್ಲುಗಳ ನಿರ್ಮಾಣದಲ್ಲಿ ಗಣನೀಯ ಏರಿಕೆಯಾಗಿದೆ.ಗುಣಮಟ್ಟದಲ್ಲೂ ಕೂಡ ಬಹಳ ಸುಧಾರಣೆಯಾಗಿದೆನಿತ್ಯ ಸುಮಾರು ಐವತ್ತಕ್ಕೂ ಹೆಚ್ಚಿನ ಧಾರಾವಾಹಿಗಳ ಪ್ರಸಾರ ಕನ್ನಡದಲ್ಲಾಗುತ್ತಿದೆಸಿನಿಮಾಗಳಂತೆಯೇ ಇಲ್ಲೂ ಅದ್ದೂರಿ ಸನ್ನಿವೇಶಗಳ ಚಿತ್ರೀಕರಣವಾಗುತ್ತಿದೆಅದರಲ್ಲೂ ಮದುವೆಯ ಚಿತ್ರಣವಿದ್ದರಂತೂ ಕೇಳುವುದೇ ಬೇಡಐಷಾರಾಮಿ ಕಲ್ಯಾಣ ಮಹೋತ್ಸವಗಳು ಇಂದು ಸೀರಿಯಲ್ ಗಳಲ್ಲಿ ಹಾಸುಹೊಕ್ಕಾಗಿ ಹೋಗಿವೆ!

ಸೀರಿಯಲ್ ಮದುವೆ-ಸಂಭ್ರಮಕ್ಕೆ ಕೊನೆಯಿಲ್ಲ!
ನೀವು ನೋಡಿರಬಹುದಾದ ಚಲನಚಿತ್ರಗಳಲ್ಲಿ ಬಹುಶಃ ತೊಂಬತ್ತಕ್ಕೂ ಹೆಚ್ಚು ಪ್ರತಿಶತ ಚಿತ್ರಗಳು ಮದುವೆಗಳಿಂದಲೇ ಮುಗಿದುಶುಭಂ ಕಾಣಿಸಿಕೊಳ್ಳುತ್ತವೆಹೀರೋ ಹೀರೋಯಿನ್ನುಗಳು ಏನೇನೋ ಕಷ್ಟಪಟ್ಟು ಕೊಟ್ಟಕೊನೆಗೆ ತಾಳಿ ಕಟ್ಟುವುದರ ಮೂಲಕ ಸಿನಿಮಾ ಅಂತ್ಯವಾಗುತ್ತದೆಆದರೆ ಧಾರಾವಾಹಿ ಜಗತ್ತಿನಲ್ಲಿ ಎಲ್ಲ ಶುರುವಾಗುವುದೇ ಮದುವೆಯಿಂದಸೇರೊದ್ದ ಹೀರೋಯಿನ್ನು ಅತ್ತೆ ಮನೆಗೆ ಬರುತ್ತಲೇ ನಮ್ಮ ಕಥೆ ಆರಂಭಸಾವಿಲ್ಲದ ಮನೆಯಿಂದ ಸಾಸಿವೆಯನ್ನಾದರೂ ತರಬಹುದು ಆದರೆ ಮದುವೆಯಿಲ್ಲದ ಸೀರಿಯಲ್ ಹುಡುಕಲು ಸಾಧ್ಯವಿಲ್ಲ.ಅದೂ ಕಳೆದ ಮೂರು ನಾಲ್ಕು ವರ್ಷಗಳ್ ಈಚೆಗಂತೂ ಅದ್ದೂರಿ ವಿವಾಹವಿಲ್ಲದ ಸೀರಿಯಲ್ಲೇ ಇಲ್ಲ ಎನ್ನಬಹುದೇನೋಧಾರಾವಾಹಿಗಳಲ್ಲಿನ ಮದುವೆಗಳಲ್ಲಿನ ಅಬ್ಬರದ ಸಂಭ್ರಮವನ್ನು ನೋಡದೇ ಇರುವ ವೀಕ್ಷಕರೇ ಇಲ್ಲ ಅನ್ನಿಸುತ್ತದೆಹೀಗಾಗಿಯೇ ಚಳಿಯೇ ಇರಲಿ ಮಳೆಯೇ ಬರಲಿಆಷಾಢವೋ-ಅಧಿಕಮಾಸವೋ ತಿಂಗಳಲ್ಲಿ ಒಂದೆರಡು ಮದುವೆಯಾದರೂ ಕಿರುತೆರೆಯಲ್ಲಿ ಪಕ್ಕಾ!ಅದ್ದೂರಿತನಕ್ಕೆ ಸರಿಸಾಟಿಯಿಲ್ಲ
ವೀಕ್ಷಕರ ಬಯಕೆಯೋಚಾನಲುಗಳ ನಿರ್ಧಾರವೋಹೆಚ್ಚು ಮಂದಿಯನ್ನ ಧಾರಾವಾಹಿಗಳ ಕಡೆಗೆ ಸೆಳೆಯುವ ಯತ್ನವೋಅದ್ದೂರಿ ಕಲ್ಯಾಣಗಳೀಗ ಟೀವಿಯಲ್ಲಿ ಸಾಮಾನ್ಯವಾಗಿ ಹೋಗಿದೆದೇವಸ್ಥಾನದಲ್ಲಿ ನಾಯಕ ನಾಯಕಿಗೆ ತಾಳಿ ಕಟ್ಟುವ ಕಾಲ ಮುಗಿದಿದೆಸಾಲು ಸಾಲು ರೆಸಾರ್ಟುಗಳೀಗ ಧಾರಾವಾಹಿಗಾಗಿ ಮದುವೆಗಾಗಿಯೇ ಬುಕ್ಕಿಂಗ್ ಆಗುತ್ತಿವೆಮಧ್ಯಮ ವರ್ಗದ ವ್ಯಥೆಯೋಶ್ರೀಮಂತರ ಕಥೆಯೋಮದುವೆಗಳು ಮಾತ್ರ ಸಂಭ್ರಮೋಪೇತವಾಗಿ ನಡೆಯಬೇಕೆಂಬ ಅಲಿಖಿತ ನಿಯಮ ಜಾರಿಗೆ ಬಂದು ಬಿಟ್ಟಿದೆಎರಡು ಮೂರು ಕುಟುಂಬಗಳ ನಡುವೆ -ಒಂದಲ್ಲ ಎರಡೆರಡು ಮದುವೆನೂರಾರು ಮಂದಿ ಸಹನಟರುಫಳಫಳ ರೇಷ್ಮೆಸೀರೆ ಕೋಟು ಬೂಟುಗಳ ಓಡಾಟಇವೆಲ್ಲ ನೀವು ನಿತ್ಯ ನೋಡುವ ಪ್ರಹಸನದ ಭಾಗವಾಗಿ ಹೋಗಿದೆಝಗಮಗ ಜೀವಕಳೆಯ ಮಂದಿ ತೆರೆಯ ಮೇಲೆ ಓಡಾಡುತ್ತಿದ್ದರೆ ಮನೆಮನೆಗಳ ವೀಕ್ಷಕರ ಮುಖವೂ ಬೆಳಗುತ್ತಿದೆಮದುವೆಯ ಸೀನುಗಳಿದ್ದರೆ ಖಂಡಿತಕ್ಕೂ ಅದಕ್ಕೆ ಹೆಚ್ಚಿನ ಟೀಆರ್ಪಿ ಬರುತ್ತದೆ ಎನ್ನುವುದು ಚಾನಲ್ಲುಗಳ ಒಳಗೆ ಕೂತ ಎಲ್ಲರಿಗೂ ಗೊತ್ತಿರುವ ಸತ್ಯ!

ಶಾಸ್ತ್ರ ಸಂಪ್ರದಾಯಗಳಿಗೆ ಮರು ಜೀವ!
ನಿಮ್ಮ ಮನೆಗಳ ಮದುವೆಗಳಲ್ಲಿ ನೀವು ಅದೆಷ್ಟು ಶಾಸ್ತ್ರಗಳನ್ನು ಪಾಲಿಸುತ್ತೀರೋ ಇಲ್ಲವೋನಾವು ಸೀರಿಯಲ್ ಮಂದಿ ಮಾತ್ರ ಇವುಗಳ ಬಗ್ಗೆ ಅಪಾರ ಕಾಳಜಿ ವಹಿಸುತ್ತೇವೆಬಳೆಪೂಜೆಯಿಂದ ಮೊದಲುಗೊಂಡು ಸಕಲೆಂಟು ಶಾಸ್ತ್ರಗಳನ್ನೂ ಹುಡುಕಿ ಅದನ್ನ ತೆರೆಯಮೇಲೆ ತರುವುದರ ಬಗ್ಗೆ ಗಮನ ಹರಿಸುವುದರಲ್ಲಿ ಯಾವ ಅನುಮಾನವೂ ಇಲ್ಲಗಂಡಿಗೂ ಹೆಣ್ಣಿಗೂ ಮದುವೆಗೆ ಮೊದಲುನಂತರಅದೇನೇ ಸಂಪ್ರದಾಯಗಳಿರಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ನೆರವೇರಿಸುವುದರಲ್ಲಿ ಸಿದ್ಧಹಸ್ತರುಪುರೋಹಿತರುಗಳಿಗೇ ಶಾಸ್ತ್ರ ಮರೆತರೂನಿರ್ದೇಶಕನಿಗೆ ಮರೆಯಲಾರದುನಾನೇ ಧಾರಾವಾಹಿಯೊಂದನ್ನು ಬರೆಯುವ ಸಂದರ್ಭದಲ್ಲಿ ಒಂದಿಷ್ಟು ಗ್ರಂಥಗಳುಗೂಗಲ್ಲು ಎಲ್ಲದರ ಸಹಾಯ ಪಡೆದು ಒಂದಾದ ಮೇಲೊಂದುಮದ್ವೆಗಳಲ್ಲಿ ಯಾವ ಯಾವ ಸಂಪ್ರದಾಯಗಳಿವೆ ಎಂದು ಅಭ್ಯಾಸ ಮಾಡಿದ್ದೆಹಾಂಇನ್ನೊಂದು ಮುಖ್ಯ ವಿಷಯನಾವು ವಸುದೈವ ಕುಟುಂಬಕಂ ಎಂಬ ಸೂಕ್ತಿಯಲ್ಲಿ ವಿಶ್ವಾಸ ಹೊಂದಿದವರು.ಹೀಗಾಗಿ ಉತ್ತರ ಭಾರತದ ಯಾವುದೋ ಒಂದು ಶಾಸ್ತ್ರ ಮಲೆನಾಡಿನ ಮದುವೆಯೊಳಗೆ ಸಣ್ಣದಾಗಿ ತೂರಿಕೊಳ್ಳಬಹುದುಶೈವರ ಮದುವೆಗೆ ದೃಶ್ಯ ಮಾಧ್ಯಮಕ್ಕೆ ಸುಂದರವಾಗಿ ಕಾಣಬಹುದಾದ ಮಾಧ್ವರದೊಂದು ಆಚರಣೆ ಸೇರಿಕೊಂಡಿರಬಹುದುನಮ್ಮನ್ನ ಮನ್ನಿಸಿರಿ!

ಹಾಡು ನೃತ್ಯಗಳ ಮಹಾನಂದ
ರೆಸಾರ್ಟ್ ಮದುವೆ ಎಂದಾದ ಮೇಲೆ ಮುಗಿದೇ ಹೋಯಿತುಆ ಧಾರಾವಾಹಿಯಲ್ಲಿನ ಮದುವೆಗೆ ಸೆಲೆಬ್ರಿಟಿ ಬರೋದು ಖಂಡಿತಅವರು ಬಂದ ಮೇಲೆ ನಾಲ್ಕು ಹೆಜ್ಜೆ ಡ್ಯಾನ್ಸು ಖಾಯಂಸೀರಿಯಲ್ಲಿ ನಾಯಕನಿಗೋ ನಾಯಕಿಗೋ ನಮ್ಮ ಸಿನಿಮಾ ಹೀರೋ ಫ್ರೆಂಡುಅವನ ಜೊತೆಗೆ ಬರುವ ದಂಡು ಒಂದು ಹಾಡೋನೃತ್ಯಕ್ಕೋ ಸೇರಿಕೊಳ್ಳದಿದ್ದರೆ ಯಾವ ಮಜವೂ ಇರಲಾರದುಲಾಜಿಕ್ಕಿನ ಕಥೆ ಬಿಡಿಇದು ಮ್ಯಾಜಿಕ್ಕಿನ ವಿಷಯಕನ್ನಡ ಧಾರಾವಾಹಿಗಳ ಮದುವೆಗಳಲ್ಲಿ ಹೆಚ್ಚಿನೆಲ್ಲ ಸೆಲೆಬ್ರಿಟಿ ಬಂದು ಹೆಜ್ಜೆ ಹಾಕಿ ಹೋಗಿದ್ದಾರೆಹಿಂದಿಯಲ್ಲಿ ಶಾರುಕ್ ಸಲ್ಮಾನ್ ಹೃತಿಕ್ ಕೂಡ ಇಂಥ ವಿವಾಹಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರೆಸೀರಿಯಲ್ ಮದುವೆಗಳ ಜನಪ್ರಿಯತೆ ಯಾವ ಮಟ್ಟಕ್ಕಿರಬಹುದು ಯೋಚಿಸಿ ನೋಡಿತಮ್ಮ ಸಿನಿಮಾಗಳನ್ನು ಪ್ರಮೋಟ್ ಮಾಡಿಕೊಳ್ಳಲು ಜನಪ್ರಿಯ ಧಾರಾವಾಹಿಯೊಂದರ ಮದುವೆಯ ವೇದಿಕೆಗಿಂತ ಉತ್ತಮ ಜಾಗ ಯಾವುದಿದೆ ಹೇಳಿ?ಹೀಗಾಗಿಯೇ ಒಂದಿಡೀ ದಿನ ಅಭ್ಯಾಸ ಮಾಡಿ ನಂತರ ಶ್ರದ್ಧಾ ಭಕ್ತಿಗಳಿಂದ ನಟನಟಿಯರು ಈ ಮದುವೆಯ ನೃತ್ಯ ವಿಶೇಷಗಳಲ್ಲಿ ಪಾಲ್ಗೊಳ್ಳುತ್ತಾರೆಇದು ಮನೆಯಲ್ಲೇ ಕೂತು ಮದುವೆ ನೋಡುವ ಮಂದಿಗೆ ಮೃಷ್ಟಾನ್ನ ಭೋಜನವೇ ಸರಿ.

ತೆರೆಯ ಹಿಂದಿನ ಶ್ರಮ
ಆದರೆ ಇಷ್ಟೆಲ್ಲವನ್ನ ಕಟ್ಟಿಕೊಡುವುದಕ್ಕೆ ತಂತ್ರಜ್ಞರ ಬಳಗ ಹಗಲು ರಾತ್ರಿಯೆನ್ನದೆ ಶ್ರಮಿಸಬೇಕುಎರಡು ಮೂರು ದಿನಗಳೊಳಾಗಿ ಹತ್ತೈವತ್ತು ದೃಶ್ಯಗಳನ್ನ ಶೂಟ್ ಮಾಡಬೇಕುನಾನೇ ಇಂತಹ ೨-೩ ಮದುವೆಗಳ ಚಿತ್ರೀಕರಣದಲ್ಲಿ ಪಾಲ್ಗೊಂಡ ಅನುಭವ ಇರುವುದರಿಂದ ಹೇಳುತ್ತಿದ್ದೇನೆಖಂಡಿತಕ್ಕೂ ಇದು ಸುಲಭವಲ್ಲದಪ್ಪನೆಯ ರೇಷ್ಮೆ ಸೀರೆಯಲ್ಲಿ ಪ್ರಖರ ಬೆಳಕಿನಲ್ಲಿ ಬೆಳಗ್ಗಿಂದ ಸಂಜೆಯವರೆಗೆ ನಗುಮೊಗ ಹೊತ್ತು ಕೂತ ನಾಯಕಿಯ ಬೆವರ ಸಂಕಟ ತೆರೆಯ ಮೇಲೆ ಕಾಣುವುದಿಲ್ಲಅಲ್ಲಲ್ಲೇ ಸೀನು ಬರೆವ ಸಂಭಾಷಣೆಕಾರಸೊಂಟ ಬಿದ್ದು ಹೋಗುವಂತೆ ಓಡಾಡುವ ಸೆಟ್ ಹುಡುಗರುಕಲಾ ನಿರ್ದೇಶಕಛಾಯಾಗ್ರಾಹಕ ತೆರೆಯ ಮೇಲೆ ಕಾಣಿಸುವುದೇ ಇಲ್ಲಇವರೆಲ್ಲರ ತೆರೆಮರೆಯ ಒದ್ದಾಟದಿಂದಲೇ ತೆರೆ ಮೇಲೆ ಸೊಗಸು ಹೆಚ್ಚುತ್ತಿರುತ್ತದೆ.

ಇನ್ನೆಷ್ಟು ದಿನ ಹೀಗೆ?
ಆದರೀಗ ವೀಕ್ಷಕ ವರ್ಗಕ್ಕೂ ಏಕತಾನತೆ ಕಾಡಲಾರಂಭಿಸಿದೆಒಂದೇ ಬಗೆಯ ಮದುವೆಗಳುಅದದೇ ಹಾಡು ನೃತ್ಯಗಳು ಬೋರಾಗಲಾರಂಭಿಸಿದೆನೈಜತೆಯಿಂದ ದೂರವೇನೋ ಅನ್ನಿಸುವ ದೃಶ್ಯಾವಳಿಗಳುಅವವೇ ಮಸಲತ್ತುಗಳು,ಮದುವೆ ನಿಲ್ಲಿಸಲು ಯಾವುದೋ ಪಾತ್ರ ಮಾಡುವ ಕಸರತ್ತುಗಳು ಆಕಳಿಕೆ ತರಿಸುತ್ತಿವೆಅದ್ದೂರಿತನವನ್ನು ಮೀರಿದ ಕಂಟೆಂಟ್ ಅನ್ನು ಜನರೀಗ ಬಯಸುತ್ತಿದ್ದಾರೆಯಾವುದೋ ಒಂದು ಧಾರಾವಾಹಿ ಈ ಸಿದ್ಧಸೂತ್ರವನ್ನು ಬದಿಗೊತ್ತಿ ಹೊಸ ದಾರಿಯನ್ನು ಹಿಡಿಯಬಹುದುಅಲ್ಲಿಯವರೆಗೆ ಸಶೇಷಹಾಂಹೇಳೋದು ಮರೆತೆಟೀವಿ ಮದುವೆಯೊಂದಕ್ಕೆ ಇತ್ತೀಚೆಗೆ ಪತ್ರಿಕೆಯಲ್ಲಿ ಅಕ್ಷತೆಯ ಸ್ಯಾಷೆ ಹಂಚಿದ್ದರು ಮೊನ್ನೆ ಮೊನ್ನೆ ತಾನೇನಂಗಂತೂ ಆ ಐಡಿಯಾ ಇಷ್ಟವಾಯಿತುಯಾರಿಗೆ ಗೊತ್ತುನಾಳೆ ನಿಮ್ಮ ಮನೆಗೇ ನುಗ್ಗಿ ಮದುವೆ ಶೂಟಿಂಗ್ ನಡೆದರೂ ಅಶ್ಚರ್ಯವಿಲ್ಲಕಾದು ನೋಡೋಣ

ಶುಕ್ರವಾರ, ಏಪ್ರಿಲ್ 07, 2017

ಹಿಮಾಲಯದ ಮರುಭೂಮಿ- ನುಬ್ರಾ ಕಣಿವೆ


ಮೈಕೊರೆಯುವ ಮೈನಸ್ ಹತ್ತು ಡಿಗ್ರಿಯ ಚಳಿ.  ಕತ್ತೆತ್ತಿ ನೋಡಿದರೆ, ಸುತ್ತಲೂ ಹಿಮದ ಸೀರೆ ಹೊದ್ದು ಮಲಗಿರುವ ಬಿಳಿಬಿಳಿ ಪರ್ವತ ಶ್ರೇಣಿಗಳು, ಮಂಜು ಕರಗಿ ಝುಳು ಹರಿಯುತ್ತಿರುವ ಸಣ್ಣ ತೊರೆಗಳು...  ಆದರೆ, ಕಾಲ ಕೆಳಗೆ ಮಾತ್ರ ಮರಳು. ಎತ್ತ ನೋಡಿದರೂ, ಮರಳ ದಿಣ್ಣೆಗಳು, ಓಡಾಡುತ್ತಿರುವ ಒಂಟೆಗಳು.. ಜೋರು ಬೀಸುವ ಗಾಳಿಗೆ ಮರಳೂ ಮೇಲೆದ್ದು  ಮುಸುಕುವ ಉಸುಕ ಬಿರುಗಾಳಿ! ಅರೆರೆ. ಎತ್ತಣ ಹಿಮಪರ್ವತ, ಎತ್ತಣ ಮರುಳ ದಿಣ್ಣೆ ಎಂದು ಯೋಚಿಸುತ್ತಿದ್ದೀರಾ? ಹೌದು. ಇಂತಹದೊಂದು ಸೋಜಿಗದ ಜಾಗ ನಮ್ಮ ಭಾರತದಲ್ಲಿಯೇ ಇದೆ ಎಂದರೆ ಅಚ್ಚರಿಯಾದೀತು. ಸ್ವರ್ಗಸದೃಶವಾದ ಈ ತಾಣ, ನುಬ್ರಾ ಕಣಿವೆ. ಮೈನವಿರೇಳಿಸುವ ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಒಡಲಲ್ಲಿ ತುಂಬಿಕೊಂಡಿರುವ ಲಢಾಕ್ ಪ್ರಾಂತ್ಯದಲ್ಲಿದೆ ಈ ನುಬ್ರಾ ವ್ಯಾಲಿ.


ಜಮ್ಮ ಕಾಶ್ಮೀರವನ್ನು ಹಾದುಹೋಗುವ ಹಿಮಾಲಯ ಪರ್ವತ ಶ್ರೇಣಿಯು, ಅಲ್ಲಿನ ಪ್ರಕೃತಿಸಿರಿಗೆ ವರದಾನವನ್ನೇ ನೀಡಿದೆ. ನಿಸ್ಸಂಶಯವಾಗಿಯೂ ನಮ್ಮ ದೇಶದ ಭೇಟಿ ನೀಡಲೇಬೇಕಾದ ಪ್ರವಾಸೀತಾಣಗಳಲ್ಲಿ ಕಾಶ್ಮೀರ ಕಣಿವೆಯೂ ಒಂದು. ಕಾಶ್ಮೀರದ ಲಢಾಕ್, ಪ್ರಾಯಶಃ ಬಹುಸಂಖ್ಯೆಯ ಪ್ರವಾಸಿಗಳು  ಬಂದು ಹೋಗುವ ಜಿಲ್ಲೆಯೂ ಹೌದು. ಲೇಹ್ ನಗರ, ವಿವಿಧ ಬೌದ್ಧಮಂದಿರಗಳು ಪ್ಯಾಂಗಾಂಗ್ ಸರೋವರ, ಖರ್ದುಂಗ್ಲಾ ಪಾಸ್ ಇಲ್ಲಿನ ಜನಮನ ಸೆಳೆಯುವ ತಾಣಗಳು. ಈ ಎಲ್ಲ ಗೌಜಿಗದ್ದಲಗಳಿಂದ ದೂರವಾಗಿ, ಲೇಹ್ ನಗರದಿಂದ ಉತ್ತರಕ್ಕೆ ಸುಮಾರ ನೂರೈವತ್ತು ಕಿಲೋಮೀಟರ್ ದೂರದಲ್ಲಿ ಇರುವ ವಿಸ್ಮಯಕಾರೀ ಕಣಿವೆಯೇ ನುಬ್ರಾ. ಕೂಗಳತೆಯ ದೂರದಲ್ಲಿ ಪಾಕಿಸ್ತಾನ ಮತ್ತು ಚೀನಾ ಎರಡರ ಗಡಿಗಳನ್ನೂ ಹೊಂದಿರುವ-ಭದ್ರತೆಯ ದೃಷ್ಟಿಯಿಂದ ಭಾರತದ ಆಯಕಟ್ಟಿನ ಜಾಗದಲ್ಲಿರುವ ಈ ಕಣಿವೆ- ಈ ಕಾರಣಕ್ಕಾಗಿಯೇ ಪ್ರವಾಸಿಗರ ವಲಯದಲ್ಲಿ ತುಂಬ ಪ್ರಸಿದ್ಧವಾಗಿಲ್ಲ.  ಸಿಯಾಚಿನ್ ಗ್ಲೇಸಿಯರ್ ಗೆ ಈ ನುಬ್ರಾ ಕಣಿವೆಯಿಂದ ಮೂವತ್ತೇ ಕಿಲೋಮೀಟರು ದೂರ!


ಲಡಾಕ್ ಮತ್ತು ಕಾರಾಕೊರಂ ಎಂಬ ಪ್ರಸಿದ್ಧ ಹಿಮಾಲಯ ಪರ್ವತಶ್ರೇಣಿಯನ್ನು  ಸಿಯಾಚಿನ್ ಮತ್ತು ಶ್ಯೋಕ್ ಎಂಬೆರಡು ನದಿಗಳು ಬೇರ್ಪಡಿಸುವ ಪ್ರಕ್ರಿಯೆಯಲ್ಲಿ ಉಂಟಾಗಿರುವ ಕಣಿವೆ ಪ್ರದೇಶ, ನುಬ್ರಾ. ಶ್ಯೋಕ್, ಸಿಂಧೂ ನದಿಯ ಉಪನದಿ. ಟಿಬೆಟಿಯನ್ ಪ್ರಸ್ಥಭೂಮಿಯ ಗುಣಲಕ್ಷಣದಂತೆ,ಕೊರೆವ ಮರುಭೂಮಿಯಾಗಿ ನುಬ್ರಾ ರೂಪುಗೊಂಡಿದೆ. ಅತಿಯಾದ ಶೀತದ ಕಾರಣದಿಂದಾಗಿ ಇಲ್ಲಿ ಯಾವುದೇ ಗಿಡ-ಮರಗಳು ವಿಫುಲವಾಗಿ ಬೆಳೆಯಲಾರವು. ಮಳೆಯೂ ಇಲ್ಲಿ ವಿರಳ. ಹೀಗಾಗಿಯೇ ಉಸುಕಿನ ದಿಣ್ಣೆಗಳು ಕಿಲೋಮೀಟರುಗಟ್ಟಲೆ ಚಾಚಿಕೊಂಡಿವೆ. ಅಚ್ಚರಿಯೆಂದರೆ, ಮರಳುಗಾಡಿನಲ್ಲಿರುವಂತೆ ಒಂಟೆಗಳೂ ಇಲ್ಲಿವೆ! ಎರಡು ಡುಬ್ಬಗಳ ಒಂಟೆಗಳು ಕುರುಚಲು ಪೊದೆಗಳ ಬಳಿ ಮೇಯುತ್ತ ನಿಂತಿರುವ ದೃಶ್ಯವನ್ನೂ ನೋಡಬಹುದು. ನೆನಪಿಡಿ- ಈ ರೀತಿಯ ಎರಡು ದಿಬ್ಬದ ಒಂಟೆಗಳು ಇಲ್ಲಿ ಬಿಟ್ಟರೆ, ಇರುವುದು ಆಸ್ಟ್ರೇಲಿಯಾದಲ್ಲಿ ಮಾತ್ರ! ನದಿಗಳು ಹರಿದು ಉಂಟಾಗಿರುವ ವಿಶಾಲ ಬಯಲು, ಉದ್ದಕ್ಕೆ ಚಾಚಿರುವ ಹಿಮಾವೃತ ಬೆಟ್ಟಗಳು ಈ ಕಣಿವೆಗೊಂದು ದಿವ್ಯ ಸೌಂದರ್ಯವನ್ನು ನೀಡಿದೆ.

ನುಬ್ರಾ ಕಣಿವೆಗೆ ಐತಿಹಾಸಿಕ ಮಹತ್ವ ಕೂಡ ಇದೆ. ಪುರಾತನ ಭಾರತದ ಪ್ರಸಿದ್ಧ ’ಸಿಲ್ಕ್ ರೂಟ್’ ಅನ್ನುವ ದಾರಿ ನುಬ್ರಾ ಕಣಿವೆಯನ್ನೇ ಹಾದು ಹೋಗುತ್ತಿತ್ತು. ಸಾಂಬಾರ ಪದಾರ್ಥ ಮತ್ತು ರೇಷ್ಮೆ ಬಟ್ಟೆಗಾಗಿ ಭರತಖಂಡಕ್ಕೆ ಬರುವ ಹೊರಗಿನ ವ್ಯಾಪರಸ್ಥರು ದುರ್ಗಮವಾದ ಈ ಕಣಿವೆಯನ್ನೇ ಹಾದು ಭಾರತಕ್ಕೆ ಬರಬೇಕಿತ್ತು. ಸುಮಾರು ೧೯೫೦ನೇ ಇಸವಿಯವರೆಗೂ ಚೀನಾದಿಂದ ಇಲ್ಲಿಗೆ- ಇಲ್ಲಿಂದ ಚೀನಾ ಕಡೆಗೆ ಜನರು ಕಾಲ್ನಡಿಗೆಯೇ ಹೋಗುತ್ತಿದ್ದರಂತೆ. ನಂತರ ರಾಜತಾಂತ್ರಿಕ ಕಾರಣಗಳಿಗೆ ಮತ್ತು ಭದ್ರತೆಯ ದೃಷ್ಟಿಯಿಂದಾಗಿ ಈ ಮಾರ್ಗವನ್ನು ಮುಚ್ಚಲಾಯಿತು.

ನುಬ್ರಾ ಕಣಿವೆ ಭಾರತದ ಅತ್ಯಂತ ಶೀತ ಪ್ರದೇಶಗಳಲ್ಲೊಂದಾಗಿದ್ದು, ಇಲ್ಲಿನ ಜನಸಂಖ್ಯೆಯೂ ವಿರಳ. ಅಲ್ಲೊಂದು ಇಲ್ಲೊಂದು ಹಳ್ಳಿಗಳಿವೆ. ದಿಸ್ಕಿತ್, ಹುಂಡುರ್, ಟುರ್ಟಕ್ ಮೊದಲಾದ ಊರುಗಳು ಅಲ್ಲಲ್ಲಿ ಸೋಮಾರಿಯಾಗಿ ಬಿದ್ದುಕೊಂಡಿವೆ. ಇಲ್ಲಿಗೆ ಬರುವ ಪ್ರವಾಸಿಗರೇ ಆದಾಯದ ಮೂಲ. ಹಿಮ ಕರಗಿ ಹರಿಯುವ ನೀರು ಇರುವುದರಿಂದ, ಅಲ್ಲಲ್ಲಿ ಬಾರ್ಲಿ, ಅಕ್ರೋಟು ಮೊದಲಾದವನ್ನು ಬೆಳೆಯುತ್ತಾರೆ. ಲಡಾಖ್ ನ ಉಳಿದ ಪ್ರಾಂತ್ಯಗಳಿಗೆ ಹೋಲಿಸಿದರೆ, ಕೃಷಿ ಚಟುವಟಿಕೆ ಇಲ್ಲೇ ಜಾಸ್ತಿ.
ನಾವೊಂದಿಷ್ಟು ಮಂದಿ ನುಬ್ರಾಕ್ಕೆ ಹೋಗಿದ್ದು ಫೆಬ್ರವರಿ ತಿಂಗಳ ಕೊರೆಯುವ ಚಳಿಯಲ್ಲಿ. ಲಢಾಕ್ ನ ಬೇರಾವುದೋ ಟ್ರೆಕ್ ಅನ್ನು ಅರ್ಧಕ್ಕೇ ಮೊಟಕುಗೊಳಿಸಬೇಕಾದ ಕಾರಣಕ್ಕಾಗಿ ಲೇಹ್ ಸುತ್ತಮುತ್ತ ಇರುವ ಒಂದಿಷ್ಟು ಜಾಗಗಳನ್ನ ನೋಡಲು ೩-೪ ದಿನಗಳ ಸಮಯ ಸಿಕ್ಕಿತ್ತು. ಈ ಹುಡುಕಾಟದ ಫಲವೇ ನುಬ್ರಾವ್ಯಾಲಿ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು.

 ಮಟಮಟ ಮಧ್ಯಾಹ್ನವೇ ಮೈನಸ್ ೧೦-೧೫ ಡಿಗ್ರಿಯ ಮೂಳೆಕೊರೆಯುವ ಚಳಿ. ಇಡೀ ನುಬ್ರಾಕ್ಕೆ ನಾವೊಂದು ಹತ್ತು ಜನ ಬಿಟ್ಟರೆ ಬೇರಾವ ಪ್ರವಾಸಿಗರೂ ಇಲ್ಲ. ಯಾವ ಗೆಸ್ಟ್ ಹೌಸ್ ಗಳಾಗಲೀ, ಹೋಟೇಲುಗಳಾಗಲೀ ಈ ಸಮಯದಲ್ಲಿ ತೆರೆದಿರುವುದಿಲ್ಲ. ರಾತ್ರಿ ಸುಮಾರು -೩೦ ಡಿಗ್ರಿಗಳವರೆಗೂ ತಾಪಮಾನ ಇಳಿಕೆಯಾಗುತ್ತದೆ. ಮನೆಗಳ, ಲಾಡ್ಜುಗಳ ನೆತ್ತಿಯ ಮೇಲಿನ ಟ್ಯಾಂಕಿನಲ್ಲಿರುವ ನೀರು ಕೂಡ ಮಂಜುಗಡ್ದೆಯಾಗಿ ಬಿಟ್ಟಿರುತ್ತದೆ! ಸಂಜೆ ಐದು ಗಂಟೆಯ ನಂತರ ಹೊರಗಡೆ ಓಡಾಡುವ ಯಾವ ಸಾಧ್ಯತೆಯೂ ಇಲ್ಲ. ನರಪಿಳ್ಳೆ ಕೂಡ ರಸ್ತೆಯಲ್ಲಿ ಇರುವುದಿಲ್ಲ. ಊರಮಂದಿಯೆಲ್ಲ ಮನೆಯೊಳಗೆ ಅಗ್ಗಿಷ್ಟಿಕೆಗಳನ್ನ ಹಾಕಿಕೊಂಡು ಕೂತಿರುತ್ತಾರೆ. ಆ ಚಳಿಯಲ್ಲೇ ಹುಂಡುರ್ ನ ಮರಳ ದಿಣ್ಣೆಗಳಲ್ಲಿ ಓಡಾಡಿ ಆಶ್ರಯ ಹುಡುಕಿಕೊಂಡು ಹೋದೆವು. ನಮ್ಮ ಟೆಂಪೋ ಟ್ರಾವೆಲರ್ ಡ್ರೈವರು ಅದೇ ಊರಿನವನಾದ ಕಾರಣಕ್ಕೆ ಗೆಸ್ಟ್ ಹೌಸೊಂದರ ಬಾಗಿಲು ತೆಗಿಸಿ, ಮಲಗುವ ವ್ಯವಸ್ಥೆ ಮಾಡಿಸಿಕೊಟ್ಟ. ನೋಡಿದರೆ, ಅಲ್ಲಿದ್ದಿದ್ದು ಒಬ್ಬ ಹೆಂಗಸು ಮಾತ್ರ. ಆಕೆ ಸಾಕ್ಷಾತ್ ಅನ್ನಪೂರ್ಣೆಯಂತೆ ನಮಗೆ ಬಿಸಿಬಿಸಿ ಫುಲ್ಕಾಗಳನ್ನ- ಅನ್ನ ದಾಲ್ ನ ಮಾಡಿ ಬಡಿಸಿದ್ದನ್ನು ನಾವೆಲ್ಲ ಎಂದಿಗೂ ಮರೆಯಲಾರೆವು! ಇಲ್ಲಿನ ಸ್ತ್ರೀಯರು ಬಹಳ ಕಷ್ಟ ಸಹಿಷ್ಣುಗಳಾಗಿದ್ದು ಗಂಡಸರಿಗಿಂತ ಹೆಚ್ಚಿನ ಕೆಲಸವನ್ನು ಅವರೇ ಮಾಡುತ್ತಾರೆ. ಹೆಚ್ಚಿನ ಹಳ್ಳಿಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಜಾಸ್ತಿ ಕಾಣಿಸುತ್ತಾರೆ!ಇಲ್ಲಿನ ಹೆಚ್ಚಿನ ಹಳ್ಳಿಗಳಲ್ಲಿ ಬೌದ್ಧರ ಮಾನೆಸ್ಟ್ರಿಗಳಿವೆ. ದಿಸ್ಕಿತ್ ನಲ್ಲಿ ಮೈತ್ರೇಯ ಬುದ್ಧನ ಮೂವತ್ತಮೂರು ಮೀಟರ್ ಎತ್ತರ ಸುಂದರ ಪ್ರತಿಮೆ ಇದೆ. ಶಾಂತಿಯ ಪ್ರತೀಕವಾಗಿರುವ ಮೈತ್ರೇಯ ಬುದ್ಧನ ಈ ಮೂರ್ತಿಯು, ಪಾಕಿಸ್ತಾನದ ಕಡೆಗೆ ಮುಖ ಮಾಡಿಕೊಂಡಿದೆ! ಹುಂಡುರ್ ನಲ್ಲಿ ಚಂಬಾ ಎಂಬ ಬೌದ್ಧ ಮಂದಿರವಿದೆ. ಪುಟಾಣಿ ಮಕ್ಕಳು ಕೆಂಪು ನಿಲುವಂಗಿಯನ್ನ ತೊಟ್ಟು ಓಡಾಡುವುದನ್ನು ನೋಡುವುದೇ ಒಂದು ಸೊಗಸು. ಸುಮುರ್ ಎಂಬಲ್ಲಿ ೧೮೫೦ ರಲ್ಲಿ ಕಟ್ಟಲ್ಪಟ್ಟ ಗೊಂಪಾ ಇದೆ. ಬೌದ್ಧ ಧರ್ಮೀಯರ ಗ್ರಂಥಗಳನ್ನು ಅಧ್ಯಯನ ಮಾಡುತ್ತ ಕೂತಿರುವ ಗುರುಗಳೂ..ಅವರುಗಳ ಶಿಷ್ಯರೂ ನಿಮಗಿಲ್ಲಿ ಕಾಣಸಿಗುತ್ತಾರೆ. ಹಾಗೇ ಇಲ್ಲಿಂದ ನುಬ್ರಾ ಕಣಿವೆಯ ನದಿಗುಂಟದ ಹಾದಿಯನ್ನು ಹಿಡಿದು ಮತ್ತೊಂದು ನೂರೈವತ್ತು ಕಿಲೋಮೀಟರು ಹೋದರೆ ಥ್ರೀ ಈಡಿಯಟ್ಸ್ ಚಿತ್ರದಿಂದಾಗಿ ಪ್ರಸಿದ್ಧವಾದ ಪ್ಯಾಂಗಾಂಗ್ ಲೇಕ್ ಸಿಗುತ್ತದೆ.

ಹಾಂ, ನೀವು ಇವುಗಳನ್ನ ಯಾವುದನ್ನೂ ನೋಡದೇ ಸುಮ್ಮನೇ ಇಲ್ಲಿನ ರಸ್ತೆಗಳಲ್ಲಿ ಅಲೆಯುತ್ತೀರಿ ಎಂದರೂ ಸೈಯೇ. ಯಾಕೆಂದರೆ ಲಢಾಕ್ ನ ಸತ್ವವಿರುವುದೇ ಉದ್ದೇಶವಿಲ್ಲದೇ ಮಾಡುವ ಅಲೆದಾಟದಲ್ಲಿ. ಏಕೆಂದರೆ ಇಲ್ಲೊಂದು ವಿಚಿತ್ರ ಅನುಭೂತಿಯಿದೆ. ಹೊರ ಜಗತ್ತಿನ ದೈನಿಕ ವ್ಯಾಕರಣಕ್ಕೆ ಹೊರತಾದ ಬದುಕಿದೆ. ಕಣ್ಣುಹಾಯಿಸಿದಷ್ಟು ಉದ್ದಕ್ಕೂ ಕಾಣುವ ಹಿಮಪರ್ವತ ಮಾಲೆ, ಬೀಸಿ ಬರುವ ಗಾಳಿಗೆ ಮೇಲೆದ್ದ ಮರಳು ಸೃಜಿಸಿದ ಧೂಳಿನ ಮಾಯಾಲೋಕ.. ನಿಮ್ಮನ್ನ ಮಂತ್ರಮುಗ್ಧರನ್ನಾಗಿಸುತ್ತದೆ. ದೈತ್ಯ ಪ್ರಕೃತಿಯೆದುರಿಗೆ ನಾವೆಷ್ಟು ಕುಬ್ಜ ಅನ್ನುವುದನ್ನು ಮರುನಿರೂಪಿಸುತ್ತದೆ. ಎಂದಾದರೊಂದು ದಿನ ಲೇಹ್ ಗೆ ಖಂಡಿತವಾಗಿಯೂ ಹೋಗಿ, ಅಲ್ಲಿಗೆ ಹೋದವರು ನುಬ್ರಾ ಕಣಿವೆಗೆ ಹೋಗುವುದನ್ನು ಮಾತ್ರ ಮರೆಯಬೇಡಿ!


ಹೋಗುವುದು ಹೇಗೆ?
ದೆಹಲಿಯಿಂದ ಲೇಹ್ ಗೆ ವಿಮಾನದಲ್ಲಿ ಅಥವಾ ರಸ್ತೆಮಾರ್ಗವಾಗಿಯೂ ಪ್ರಯಾಣಿಸಬಹುದು. ಆದರೆ ಚಳಿಗಾಲದಲ್ಲಿ ಮನಾಲಿ-ಜಮ್ಮು ರಸ್ತೆಯಲ್ಲಿ ಸಂಚಾರ ನಿಷಿದ್ಧ. ಡಿಸೆಂಬರ್ ನಿಂದ ಮಾರ್ಚ್- ಕೇವಲ ವಿಮಾನದಲ್ಲಷ್ಟೇ ಲೇಹ್ ಗೆ ತಲುಪಬಹುದು. ಅಲ್ಲಿಂದ ಯಾವುದಾದರೂ ಕಾರ್/ಟೆಂಪೋ ಟ್ರಾವೆಲರ್ ನಲ್ಲಿ ನುಬ್ರಾಗೆ ಹೋಗಬಹುದು. ಲೇಹ್ ಪಟ್ಟಣದಿಂದ ನುಬ್ರಾಗೆ ೧೫೦ ಕಿಲೋಮೀಟರು, ಐದರಿಂದ ಆರುಗಂಟೆಗಳ ಪ್ರಯಾಣ. ಮೊದಲೇ ವಸತಿ ಸೌಕರ್ಯವನ್ನು ಕಾಯ್ದಿರಿಸಿಕೊಂಡು ಹೋಗುವುದು ಒಳಿತು.ಖರ್ದುಂಗ್ಲಾ ಪಾಸ್
ನುಬ್ರಾ ಕಣಿವೆಗೆ ತೆರಳಬೇಕಿದ್ದರೆ ಜಗತ್ತಿನ ಅತ್ಯಂತ ಎತ್ತರದ ಮೋಟರೇಬಲ್ ಪಾಸ್ ಎಂದೇ ಪ್ರಸಿದ್ಧವಾಗಿರುವ ಖರ್ದುಂಗ್ಲಾ ಪಾಸ್ ಅನ್ನು ದಾಟಿಕೊಂಡು ಹೋಗಬೇಕು. ೧೮,೩೮೦ ಅಡಿಗಳೆತ್ತರದಲ್ಲಿರುವ ಖರ್ದುಂಗ್ಲಾದಲ್ಲೊಂದೆರಡು ಫೋಟೋ ಕ್ಲಿಕ್ಕಿಸಿಕೊಂಡು ಮತ್ತೆ ೮ ಸಾವಿರ ಅಡಿಗಳಷ್ಟು ಕೆಳಗಿಳಿದರೆ ವಿಸ್ತಾರವಾಗಿ ಚಾಚಿಕೊಂಡಿರುವ ನುಬ್ರಾ ಕಣಿವೆ ಕಾಣಿಸುತ್ತದೆ. ಖರ್ದುಂಗ್ಲಾದಲ್ಲಿ ಹಿಮಪಾತವಾಗಿದ್ದರೆ ರಸ್ತೆ ಮುಚ್ಚಿಕೊಂಡು ಮುಂದಿನ ಪ್ರಯಾಣ ಸಾಧ್ಯವಾಗದೇ ಹೋಗಬಹುದು. ಹೀಗಾಗಿ, ಖರ್ದುಂಗ್ಲಾದ ವಾತಾವರಣ ಹೇಗಿದೆ ಅನ್ನುವುದರ ಮೇಲೆ ನುಬ್ರಾ ನೋಟ ಸಾಧ್ಯ!

ಕಣ್ಣಳತೆ ದೂರದಲ್ಲೇ ಸಿಯಾಚಿನ್!
ನುಬ್ರಾ ವ್ಯಾಲಿಯಿಂದ ಸಿಯಾಚಿನ್ ದರ್ಶನ ಭಾಗ್ಯ ಸಿಗುತ್ತದೆ. ಸಿಯಾಚಿನ್ ನ ಬೇಸ್ ಕ್ಯಾಂಪ್ ಗೆ ನುಬ್ರಾ ಮೂಲಕವೇ ಸಾಗಿ ಹೋಗಬೇಕು. ಬೇಸ್ ಕ್ಯಾಂಪ್ ವರೆಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶ. ಅಲ್ಲಿಂದ ಮುಂದೆ ನಿಷೇಧಿತ ಪ್ರದೇಶ. ಮಿಲಿಟರಿ ಒಪ್ಪಿಗೆಯಿಲ್ಲದೇ ಮುಂದೆ ಸಾಗುವಂತಿಲ್ಲ. ಸಿಯಾಚಿನ್  ಬೇಸ್ ಕ್ಯಾಂಪ್ ಗೆ ಹೋಗುವ ಸೈನ್ಯದ ಟ್ರಕ್ ಗಳು ದಾರಿಯುದ್ಧಕ್ಕೂ ಅಲ್ಲಲ್ಲಿ ಕಾಣಸಿಗುತ್ತವೆ. ಬಿಳಿಯ ಸಮವಸ್ತ್ರ ತೊಟ್ಟ ಸೈನಿಕರೂ ಹಸನ್ಮುಖರಾಗಿ ಪ್ರವಾಸಿಗರನ್ನ ಮಾತನಾಡಿಸುತ್ತಾರೆ.


ಬುಧವಾರ, ನವೆಂಬರ್ 23, 2016

ಗ್ರಹಣ್- ನಂದನವಿಳಿದಿದೆ ಭುವಿಗೆ!


ಸುತ್ತ ಎತ್ತ ತಿರುಗಿದರೂ ಹಿಮಾಚ್ಛಾದಿತ ಬೆಟ್ಟಗಳುತುದಿಯಲ್ಲಿ ಬಿಳಿಹಿಮದ ಟೊಪ್ಪಿಹಸಿರ ಇಳಿಜಾರ ತಪ್ಪಲುಉದ್ದುದ್ದನೆಯ ದೇವದಾರು ಮರಗಳ ಕಾಡುಗಳು..ತಂಪು ಗಾಳಿಯಲ್ಲಿ ತೇಲಿ ಬರುವ ಕಾಡುಹೂವ ಗಂಧಇದಕ್ಕಿಂತ ಶುದ್ಧವಾದ ಗಾಳಿ ಅದೆಲ್ಲೂ ಬೀಸಲಾರದೇನೋ ಎಂಬ ಅನುಭೂತಿಗಾಢ ಬಣ್ಣದ ಮರದ ಮನೆಗಳುಹಿಮಗಾಳಿಗೆ ಛಾವಣಿ ಅಲುಗಬಾರದೆಂಬ ಕಾರಣಕ್ಕೆ ಮನೆಗಳ ನೆತ್ತಿಯ ಮೇಲೆ ಕಪ್ಪು ಕಲ್ಲುಗಳ ಸಾಲುಮೈತುಂಬ ಉಣ್ಣೆಯ ಬಟ್ಟೆಗಳನ್ನ ಬೆಚ್ಚಗೆ ಹೊದ್ದುಕೊಂಡ ಚಿಣ್ಣರುಸೊಗಸಾದ ಗ್ರಾಮ ದೇಗುಲಗಳುನಗು ನಗುತ್ತಲೇ ಮಾತನಾಡಿಸುವ ಮಾನಿನಿಯರುಹೇಸರಗತ್ತೆಕುದುರೆಗಳನ್ನ ನಮ್ಮಲ್ಲಿನ ದನಗಳ ಹಾಗೆ ದೊಡ್ಡಿಗೆ ಹೊಡೆದುಕೊಂಡು ಹೋಗುವ ಗಂಡಸರು..ಗ್ರಹಣ ಎಂಬ ಹಳ್ಳಿ ನಮ್ಮನ್ನ ಸ್ವಾಗತಿಸಿದ್ದು ಹೀಗೆ.ಹಿಮಮಯ ಪರ್ವತ ಶ್ರೇಣಿಗಳ ಮಧ್ಯೆ ಅಡಗಿಕೊಂಡಿರುವ ಈ ಊರು ಒಂದು ಪುಟ್ಟ ಸ್ವರ್ಗವೇ ಸರಿ!


ಜಗದ ಎಲ್ಲ ಜಂಜಡಗಳನ್ನ ಮರೆತು ಪ್ರಕೃತಿಯ ಮಧ್ಯೆ ಕಳೆದುಹೋಗಬೇಕು ಎಂಬ ಆಸೆಯಿದ್ದರೆ ಈ ಹಳ್ಳಿಯೇ ನಿಮ್ಮ ಮುಂದಿನ ತಾಣಹಿಮಾಚಲ ಪ್ರದೇಶದಕುಲು ಜಿಲ್ಲೆಯಲ್ಲಿರುವ ಗ್ರಹಣ್ ಹಳ್ಳಿಸಮುದ್ರ ಮಟ್ಟದಿಂದ ಎರಡೂವರೆ ಸಾವಿರ ಮೀಟರ್ ಎತ್ತರದಲ್ಲಿದೆಹಿಮಾಚಲದ ರಾಜಧಾನಿ ಶಿಮ್ಲಾದಿಂದ ೧೩೦ ಕಿಲೋಮೀಟರ್ ದೂರದಲ್ಲಿರುವ ಗ್ರಹಣ್ಹಿಮಾಲಯದ ಗರ್ಭದೊಳಗೆ ಹುದುಗಿದೆಹತ್ತಿರದ ಊರು ಕಸೋಲ್೧೦ ಕಿಮೀ ದೂರಹಾಂಹತ್ತೆಂಬುದು ಕೇವಲ ಅಂಕೆ ಅಷ್ಟೇಯಾಕೆಂದರೆ ಹತ್ತು ಕಿಲೋಮೀಟರ್ ದೂರ ಕ್ರಮಿಸಬೇಕು ಎಂದರೆ ನಾಲ್ಕರಿಂದ ಐದುತಾಸುಗಳ ಏರು ದಾರಿಯ ನಡಿಗೆ ಅನಿವಾರ್ಯ!

ಆದರೆ ಈ ಪಯಣದ ದಾರಿಯ ಸೊಬಗುಆಗಬಹುದಾದ ಎಲ್ಲ ಆಯಾಸವನ್ನು ಮರೆಸುವುದರಲ್ಲಿ ಅನುಮಾನವೇ ಇಲ್ಲಹಿಮಾಲಯದ ತಪ್ಪಲಿನ ಕಸೋಲ್ ಊರಿನ ಹೊರಗೆ ಹರಿಯುವ ಪಾರ್ವತೀ ನದಿಯ ಗುಂಟ ಹೊರಡುವ ಹಾದಿಯನ್ನು ಹಿಡಿದು ನಡೆಯಲು ಆರಂಭಿಸಿದರೆ ತಪ್ಪದ ದಾರಿಯಲ್ಲೂ ನೀವು ಕಳೆದುಹೋಗುತ್ತೀರಿಏಕೆಂದರೆ ಅಲ್ಲಿನ ಸೊಬಗು ಹಾಗಿದೆಸಾಲು ಮರಗಳ ಕೆಳಗೆ ಎಳೆ ಬಿಸಿಲಾ ಮಣಿ ಕನಕ.. ಎನ್ನುವ ನರಸಿಂಹ ಸ್ವಾಮಿಯವರ ಕವನದ ಸಾಲಿನ ನಿಜಾರ್ಥ ಇಲ್ಲಿ ಸಾಕಾರಗೊಳ್ಳುತ್ತದೆಹಿಮ ಕರಗಿ ಹರಿಯುವ ಹಳ್ಳಕೊಳ್ಳಗಳು ಉದ್ದಕ್ಕೂ ನಮ್ಮ ಜೊತೆಗೆ ಬರುತ್ತವೆಮಧ್ಯದಲ್ಲೆಲ್ಲೋ ಒಂದಿಷ್ಟು ಕುರಿಗಳನ್ನ ಕೆಳಗಿ ಮೇಯಿಸಲು ಕರೆದುಕೊಂಡು ಬಂದಿರುವ ಹಳ್ಳಿಗರು ಸಿಗುತ್ತಾರೆಭಾಂಗ್ ನ ನಶೆಯಲ್ಲಿ ಮೆತ್ತಗೆ ಓಲಾಡುತ್ತ ನಮ್ಮ ನೋಡಿ ನಕ್ಕು ತಮ್ಮ ಪಾಡಿಗೆ ಕಾಡಿನ ಮಧ್ಯೆ ನಡೆದು ಹೋಗುತ್ತಾರೆ.


ದಟ್ಟ ದೇವದಾರು ಮರಗಳ ಮಧ್ಯೆ ನಡೆದು ಹೋಗುವುದೇ ಇಲ್ಲಿನ ಮಧುರಾನುಭೂತಿಗಳಲ್ಲೊಂದುಉದ್ದುದ್ದಕ್ಕೆ ಬೆಳೆದು ನಿಂತಿರುವ ಮರಗಳಲ್ಲಿ ಬಗೆಬಗೆಯ ಹಕ್ಕಿಗಳ ಕೂಜನ.. ಪಕ್ಕದಲ್ಲೇ ಸದ್ದು ಮಾಡುತ್ತ ಹರಿವ ನದಿಎತ್ತರೆತ್ತರಕ್ಕೆ ಏರುತ್ತಿದ್ದಂತೆ ನಮ್ಮನ್ನಾವರಿಸುವ ತೆಳು ಮೋಡದ ಪರದೆ.. ಮಳೆಯೋ ಮಂಜಹನಿಯೋ ಗೊತ್ತಾಗದ ತುಂತುರು.. ಹೀಗೆ ಇವೆಲ್ಲವುಗಳನ್ನ ದಾಟಿಕೊಂಡು ಬಂದರೆ ಗ್ರಹಣ್ ನಮ್ಮೆದುರಿಗೆ ತೆರೆದುಕೊಳ್ಳುತ್ತದೆ.

ಕೇವಲ ಅರವತ್ತೆಪ್ಪತ್ತು ಮನೆಗಳಿರುವ ಗ್ರಹಣ್ಪಾರ್ವತಿ ಕಣಿವೆಯ ನೆತ್ತಿಯಲ್ಲಿರುವ ಕೊನೆಯ ಹಳ್ಳಿಸರ್ ಪಾಸ್ ಎಂಬ ಹಿಮಾಲಯ ಪರ್ವತ ಶ್ರೇಣಿಯ ಚಾರಣಿಗರುಹೆಚ್ಚಾಗಿ ಗ್ರಹಣ್ ದಾಟಿಕೊಂಡೇ ಮುನ್ನಡೆಯುವುದರಿಂದ ಈ ಹಳ್ಳಿಯ ಸೌಂದರ್ಯ ಜಗತ್ತಿಗೆ ಅರಿವಾಯಿತುಬೆಟ್ಟವೊಂದರ ಮಧ್ಯೆ ನಿರ್ಮಿತಗೊಂಡಿರುವ ಈ ಹಳ್ಳಿಯ ಮಂದಿ ಜೀವನೋಪಾಯಕ್ಕೆ ಹತ್ತಿರದ ಕಸೋಲ್ ಪಟ್ಟಣವನ್ನೇ ನೆಚ್ಚಿಕೊಂಡಿದ್ದಾರೆಹೆಚ್ಚಿನ ಯುವಕರು ಅಲ್ಲಿ ಟೂರಿಸ್ಟ್ ಗೈಡ್ ಆಗೋ ಅಂಗಡಿಗಳಲ್ಲೋ ಕೆಲಸ ನೋಡಿಕೊಂಡಿದ್ದರೆಭತ್ತ ಬಾರ್ಲಿಗಳನ್ನ ಗುಡ್ಡದ ತಪ್ಪಲಲ್ಲಿ ಬೆಳೆಯುವ ಊರ ಹಿರಿಯರು ಬೇಸಾಯವನ್ನೇ ಆಧರಿಸಿಕೊಂಡಿದ್ದಾರೆ.

ಗ್ರಹಣ್ ಗೆ ವರುಷವಿಡೀ ಮಳೆ ಮೋಡಗಳಿಂದಲೋಮಂಜಿನಿಂದಲೋ ಮುಕ್ತಿಯಿಲ್ಲ.ಸದಾಕಾಲ ಸೂರ್ಯನ ಕಿರಣಗಳಿಂದ ವಂಚಿತವಾಗಿಯೇ ಇರುವುದಕ್ಕೆ ಗ್ರಹಣ ಎನ್ನುವ ಹೆಸರಂತೆ ಈ ಊರಿಗೆಆದರೆ ನಾವೊಂದಿಷ್ಟು ಸ್ನೇಹಿತರು ಅಲ್ಲಿಗೆ ತೆರಳಿದ್ದಾಗ ಅದು ಸೂರ್ಯದೇವನು ಪ್ರಸನ್ನನಾಗಿದ್ದ ಕಾಲ.ಮಳೆ-ಮಂಜಿನ ಮಧ್ಯೆಯೂ ಆಗಾಗ ಆತ ಕಾಣಿಸಿಕೊಂಡು ನಗು ಬೀರಿದ.ಹೀಗಾಗಿ ಅಲ್ಲಿನ ನಿಜದ ತೊಂದರೆ ಅರಿವಾಗಲಿಲ್ಲಆದರೆ ಅಲ್ಲಿನ ನಿವಾಸಿಗಳ ಜೀವನ ನಿಜಕ್ಕೂ ಕಷ್ಟಕರ.ದಟ್ಟ ಕಾಡಿನ ಮಧ್ಯೆ ಸಾಗಿ ಬಂದಿರುವ ವಿದ್ಯುತ್ ಲೈನು ಎರಡು ದಿನ ಕರೆಂಟು ನೀಡಿದರೆ ಮತ್ತೆ ಹದಿನೈದು ದಿನ ನಾಪತ್ತೆಊರಿಗೊಂದೇ ಫೋನುಅದೂ ಕೆಟ್ಟರೆ ಅಷ್ಟೇ ಕತೆಎಲ್ಲೋ ಕಣಿವೆಯಲ್ಲಿ ಬಿದ್ದ ಮರದ ಗೆಲ್ಲು ಹೊರ ಜಗತ್ತಿನಿಂದ ಸಂಪೂರ್ಣವಾಗಿ ಗ್ರಹಣ್ ನ ಸಂಪರ್ಕ ಕಡಿದು ಬಿಡುತ್ತದೆಹಳ್ಳಿಯಲ್ಲೊಂದು ಶಾಲೆಯಿದೆಅದೂ ಪ್ರೈಮರಿ ಸ್ಕೂಲುಆಮೇಲಿನ ಶಿಕ್ಷಣಕ್ಕೆ ನಿತ್ಯ ೨೦ ಕಿಲೋಮೀಟರು ಹತ್ತಿಳಿಯುವುದು ಅಸಾಧ್ಯದ ಮಾತುಮೊದಲೇ ಬಡಮಂದಿಎಲ್ಲೋ ಉಳ್ಳ ಒಂದಿಷ್ಟು ಮಂದಿ ಮಾತ್ರ ದೂರದ ಊರಗಳಲ್ಲಿ ಮಕ್ಕಳನ್ನ ಉಳಿಸಿ ಶಿಕ್ಷಣ ಕೊಡಿಸುತ್ತಾರಂತೆಮೂಲಭೂತ ಸೌಕರ್ಯಗಳು ಸಮರ್ಪಕವಾಗಿಲ್ಲಜನಪ್ರತಿನಿಧಿಗಳು ಬೆಟ್ಟ ಹತ್ತಿ ಬಂದು ಮಾತನಾಡಿಸಿದ ದಾಖಲೆಯೇ ಇಲ್ಲತೀವ್ರ ಮಂಜು ಸುರಿಯುವ ಕಾಲದಲ್ಲಿ ಈ ಹಳ್ಳಿಯಲ್ಲಿ ಮೂರು ನಾಲಕ್ಕು ಅಡಿಗಳಷ್ಟು ಹಿಮ ಬಿದ್ದಿರುತ್ತದೆಯಂತೆಆಗಿನ ನಮ್ಮ ಕತೆ ದೇವರಿಗೇ ಪ್ರೀತಿ ಎಂದು ಹಳ್ಳಿಗರು ನಿಟ್ಟುಸಿರು ಬಿಡುತ್ತಾರೆ.

ಹಾಗೆಂದು ಹಳ್ಳಿಗರ ಜೀವನಪ್ರೀತಿಗೆ ಯಾವುದೇ ಕೊರತೆಯಿಲ್ಲಬಂದ ಪ್ರವಾಸಿಗರನ್ನ ನಗುನಗುತ್ತಲೇ ಮಾತನಾಡಿಸುತ್ತಾರೆಅಂಥ ದುರ್ಗಮ ಊರಿನಲ್ಲೂ ಒಂದು ಪುಟ್ಟ ಕೆಫೆ ಇದೆಹೋಂ ಸ್ಟೇ ಇದೆಅದರ ಮಾಲಿಕ ತೀರಾ ಸಾಮಾನ್ಯ ಬೆಲೆಗೆ ಟೀ ಕಾಫಿ ನೀಡುವುದನ್ನ ನೋಡಿ ನಾವು ದಂಗುಬಡಿದು ಹೋದೆವುಸ್ಯಾಂಡ್ ವಿಚ್ಚಿನಿಂದ ತೊಡಗಿ ಪಿಜ್ಜಾದವರೆಗೆ ಎಲ್ಲವೂ ಲಭ್ಯಹಿಮದ ಟೋಪಿಗಳನ್ನ ಹೊದ್ದ ಪರ್ವತ ಶ್ರೇಣಿಗಳನ್ನ ದಿಟ್ಟಿಸುತ್ತ ತಂಪು ಸಂಜೆಯಲ್ಲಿ ಬಿಸಿ ಚಹಾ ಹೀರುವ ಸಂತೋಷವನ್ನು ಬರಹದಲ್ಲಿ ಹೇಳಲು ಸಾಧ್ಯವೇ ಇಲ್ಲನಾವು ಚಹಾ ಹೀರುತ್ತ ಕೂತಿದ್ದಾಗ ಅಲ್ಲೇ ಪಕ್ಕದ ಪುಟ್ಟ ಮೈದಾನದಲ್ಲಿ ಒಂದಿಷ್ಟು ಮಕ್ಕಳು ಕ್ರಿಕೆಟ್ ಆಟದಲ್ಲಿ ಮುಳುಗಿದ್ದರುಕರೆಂಟೇ ಸರಿಯಾಗಿ ಇಲ್ಲದ ಊರನ್ನೂ ಈ ಕ್ರಿಕೆಟ್ ಆವರಿಸಿದೆಯಲ್ಲಪ್ಪ ಎಂದು ಅಚ್ಚರಿಯಾಯಿತು!


ದೇವರ ಬಗ್ಗೆ ಅಪಾರ ನಂಬುಗೆ ಹೊಂದಿರುವ ಹಳ್ಳಿಯ ಮಂದಿ ತಮ್ಮ ಗ್ರಾಮದೇವರಿಗೆ ಸುಂದರವಾದ ಮಂದಿರ ನಿರ್ಮಿಸಿದ್ದಾರೆಪ್ರಕೃತಿ ಆರಾಧನೆಯ ಬಗ್ಗೆ ಹೆಚ್ಚಿನ ಆಸ್ಥೆ ಇರುವ ಇಲ್ಲಿನ ಜನದೂರ ಬೆಟ್ಟದ ಮೇಲಿನ ತಮ್ಮ ಗ್ರಾಮ ದೇವತೆಗೆ ವರುಷದಲ್ಲೊಮ್ಮೆ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ.ನಾವಲ್ಲಿಗೆ ತೆರಳಿದಂದೇ ಆ ಪೂಜೆಯೂ ಇದ್ದಿದ್ದು ನಮ್ಮ ಭಾಗ್ಯನಮ್ಮಲ್ಲಿಂತೆಯೇ ಪಲ್ಲಕ್ಕಿಯ ಮೇಲೆ ದೇವರನ್ನ ಕೂರಿಸಿಕೊಂಡುಬ್ಯಾಂಡು ವಾದ್ಯಗಳ ಜೊತೆಗೆ ಕಡಿದಾದ ಹಿಮ ಪರ್ವತವನ್ನ ಹತ್ತಿ ಹೋಗಿದ್ದನ್ನು ನಾವೆಲ್ಲ ಕಣ್ಣಾರೆ ಕಂಡೆವುಬರಿಯ ಚಪ್ಪಲಿಟೀ ಶರ್ಟುಗಳಲ್ಲಿ ಮುಂದೆ ನಡೆಯುತ್ತದ ಒಬ್ಬಾತನನ್ನು ಅರೇ ಭಾಯ್ ಇದೇನಿದು.. ನೀವು ಏನೂ ವ್ಯವಸ್ಥೆ ಇಲ್ಲದೇ ಹಿಮಪರ್ವತ ಹತ್ತೋಕೆ ಹೊರಟಿದ್ದೀರಲ್ಲ ಎಂದು ಕೇಳಿದರೆ.. ಮಾ ಹಮೇ ಬಚಾತೀ ಹೈ ಎಂದಏನೂ ಸಮಸ್ಯೆ ಆಗಲ್ಲ ನಮಗೆಇದೆಲ್ಲ ಅಭ್ಯಾಸ ಆಗಿ ಹೋಗಿದೆನೀವು ಅಲ್ಲೆಲ್ಲಿಂದಲೋ ಬರೋರಿಗೆ ದೊಡ್ಡ ಶೂಜಾಕೇಟು ಟೊಪ್ಪಿ ಎಂದು ಹಿರಿಯರೊಬ್ಬರು ನಕ್ಕರು.

ಪ್ರಕೃತಿ ಮಾತೆಯ ಮಧ್ಯೆ ಬದುಕುವ ಅವರ ಮಾತು ಸತ್ಯವೇ ಆಗಿತ್ತುನಮಗೆ ಗ್ರಹಣ್ಚಾರಣದ ತಾಣಅವರಿಗೆ ಅದು ಬದುಕುಅಂಥ ಬದುಕನ್ನ ಕಂಡ ನಮ್ಮ ಜೀವನೋತ್ಸಾಹವೂ ಹೆಚ್ಚಿದ್ದು ಖಂಡಿತ ಸುಳ್ಳಲ್ಲಒಮ್ಮೆ ಗ್ರಹಣ್ ಗೆ ಹೋಗಿಬನ್ನಿಕತ್ತಲು ಕಳೆಯುತ್ತದೆ!

ಸೋಮವಾರ, ನವೆಂಬರ್ 21, 2016

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಕಂಪು


ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶದಲ್ಲಿ, ತಂತ್ರಜ್ಞಾನವು ಸಂವಹನದ ಪರಿಭಾಷೆಯನ್ನೇ ಬದಲಿಸಿದೆ. ಸಾಮಾಜಿಕ ಜಾಲತಾಣಗಳ ವ್ಯಾಪಕ ಬಳಕೆ, ಭಾಷೆಯ ಹರಿವನ್ನು ಹೆಚ್ಚಿಸಿದೆ. ಭಾಷೆಯ ಬೆಳವಣಿಗೆ ಎಂದರೆ ಕೇವಲ ಸಾಹಿತ್ಯ ಕೃತಿಗಳು-ಸಿನಿಮಾ-ಸಂಗೀತ ಎಂಬ ಮಾಮೂಲು ಚೌಕಟ್ಟನ್ನು ಮೀರಿ, ಜನಸಾಮಾನ್ಯರೂ ಕೂಡ ತಮ್ಮ ಭಾಷೆಗಳ ಬಳಕೆಯನ್ನು ಅಂತರ್ಜಾಲದಲ್ಲಿ ಮಾಡುವ ಮೂಲಕ, ಭಾಷೆಯ ಬಳಕೆಯ ಪರಿಧಿಯು ಹೆಚ್ಚಾಗಿದೆ. ಅಂತರ್ಜಾಲದಲ್ಲಿನ ಇಂಗ್ಲೀಷ್ ಅಧಿಪತ್ಯವನ್ನು ಯಾರೂ ಪ್ರಶ್ನೆ ಮಾಡುವ ಹಾಗೆಯೇ ಇಲ್ಲದೇ ಹೋದರೂ ಕೂಡ, ಇತರ  ಪ್ರಾದೇಶಿಕ ಭಾಷೆಗಳು ಕೂಡ ತಮ್ಮ ಬೇರುಗಳನ್ನು ನಿಧಾನಕ್ಕೆ ಜಾಲಪ್ರಪಂಚದೊಳಗೆ ಇಳಿಬಿಡುತ್ತಿವೆ. ಅಲ್ಲಿನ ಸತ್ವವನ್ನು ಹೀರಿಕೊಂಡು ವಿಶಾಲ ವೃಕ್ಷವಾಗಿ ಬೆಳೆಯುವತ್ತ ಮುನ್ನಡೆಯುತ್ತಿವೆ.

ಕನ್ನಡ ಭಾಷೆಯನ್ನೇ ಗಮನಿಸುವುದಾದರೆ ಪ್ರಾಯಶಃ ೨೦೦೦ನೇ ಇಸವಿಯ ನಂತರ ನಿಧಾನಕ್ಕೆ ಕನ್ನಡವನ್ನು ಅಂತರ್ಜಾಲದಲ್ಲಿ ಬಳಸುವವರ ಸಂಖ್ಯೆ ಹೆಚ್ಚುತ್ತ ಹೋಯಿತು. ಅದಕ್ಕೂ ಮೊದಲು ಒಂದೆರಡು ಕನ್ನಡ ಅಂತರ್ಜಾಲ ತಾಣಗಳಿದ್ದು, ಓದುಗರಷ್ಟೇ ಆಗಿದ್ದ ಹಲವರು ಬ್ಲಾಗ್ ಎಂಬ ಹೊಸ ಸಾಧ್ಯತೆಯ ಬಗ್ಗೆ ತಿಳಿದೊಡನೆಯೇ ಬರಹಗಾರರೂ ಆಗಿ ಬದಲಾದರು. ಯಾರು ಬೇಕಿದ್ದರೂ, ಏನು ಬೇಕಿದ್ದರೂ ಬರೆದು ಜಾಲಜಗತ್ತಿನಲ್ಲಿ ಹರಿಬಿಡಬಹುದು ಎಂದು ಯೋಚನೆಯೇ ಬಹಳ ರೋಮಾಂಚನಕಾರಿಯಾಗಿತ್ತು! ಈ ಮೊದಲು ಪತ್ರಿಕೆಗಳಿಗೋ, ಮ್ಯಾಗಜೀನುಗಳಿಗೋ ಕತೆ ಕವಿತೆಗಳನ್ನು ಕಳುಹಿಸಿ ತಿಂಗಳಾನುಗಟ್ಟಲೆ ಕಾದು ಕೂರುವ ಬದಲು, ಬ್ಲಾಗ್ ಜಗತ್ತಿನ ಮೂಲಕ ಈ ಕ್ಷಣದ ಯೋಚನೆ-ಲಹರಿಗಳು ಬರೆದು ಪಬ್ಲಿಷ್ ಮಾಡಬಹುದು, ಅದಕ್ಕೆ ಕೂಡಲೇ ಜನರ ಪ್ರತಿಕ್ರಿಯೆ ಕೂಡ ಲಭ್ಯವಾಗುತ್ತದೆ ಎನ್ನುವ ಯೋಚನೆಯೇ ಚೇತೋಹಾರಿಯಾಗಿತ್ತು ಕೂಡ. ನಿಧಾನಕ್ಕೆ ಶುರುವಾದ ಕನ್ನಡ ಬ್ಲಾಗುಗಳ ಸಂಖ್ಯೆ ಸಾವಿರ ಸಾವಿರ ಸಂಖ್ಯೆಯಲ್ಲಿ ಹೆಚ್ಚು ಹೋಯಿತು. ಆ ಸಮಯಕ್ಕೆ ಶುರುವಾದ ಆರ್ಕುಟ್ ಎನ್ನುವ ಸಾಮಾಜಿಕ ಜಾಲತಾಣ, ಬ್ಲಾಗ್ ನ ಜನಪ್ರಿಯತೆ ಹೆಚ್ಚುವಲ್ಲಿ ಬಹಳ ಸಹಕಾರಿಯಾಯಿತು. ಯುನಿಕೋಡ್ ತಂತ್ರಜ್ಞಾನವನ್ನು ಬಳಸಿ ಅಂತರ್ಜಾಲದಲ್ಲಿ ಕನ್ನಡ ಬರೆಯುವ ಸೌಲಭ್ಯವನ್ನು ಬಹುಮಂದಿ ಬಳಸಿಕೊಂಡರು.

ಕನ್ನಡ ಭಾಷೆಯನ್ನು ಅಂತರ್ಜಾಲದಲ್ಲಿ ಬಳಸಲು ಆರಂಭಿಸಿದವರಲ್ಲಿ ಎಲ್ಲ ಬಗೆಯ ವೃತ್ತಿಗಳಲ್ಲಿ ಇದ್ದವರೂ ಇದ್ದರು. ಕಂಪ್ಯೂಟರಿನ ಬಳಕೆಯ ಬಗ್ಗೆ ಅರಿವಿದ್ದ, ನಿತ್ಯ ತಮ್ಮ ವೃತ್ತಿಗಾಗಿ ಗಣಕ ಬಳಸುತ್ತಿದ್ದವರು ಪ್ರವೃತ್ತಿಗಾಗಿ ಬ್ಲಾಗು-ಜಾಲತಾಣಗಳನ್ನು ನೆಚ್ಚಿಕೊಂಡರು. ಕನ್ನಡ ಕವನ-ಕಥೆ-ಕಾದಂಬರಿಗಳನ್ನು ಬರೆದರು. ದಟ್ಸ್ ಕನ್ನಡ, ಸಂಪದದಂತಹ ವೆಬ್ ಸೈಟುಗಳು ಹೊಸ ಬರಹಗಾರರಿಗೆ ಮಣೆ ಹಾಕಿದವು. ಬ್ಲಾಗುಗಳ ಸಮೃದ್ಧಿಯ ಮಳೆ ಸುರಿವ ಕಾಲದಲ್ಲಿಯೇ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುವ ಹಲವು ವೆಬ್  ಸೈಟುಗಳು ಕೂಡ ಹುಟ್ಟಿಕೊಂಡವು. ಅವುಗಳನ್ನ  ಹಿಂಬಾಲಿಸಲು, ಹಂಚಿಕೊಳ್ಳಲು ಗೂಗಲ್ ರೀಡರ್, ಆರ್ಕುಟ್ ನಂತಹ ತಾಣಗಳು ಸಹಕರಿಸಿದವು. ಕನ್ನಡ ವಿಕಿಪೀಡಿಯಾ ಪುಟಗಳು ಕೂಡ ಇದೇ ಸುಮಾರಿಗೆ ಆರಂಭಗೊಂಡವು.
ಭಾರತದಲ್ಲಿ ಅಂತರ್ಜಾಲ ಬಳಕೆಯು ಹೆಚ್ಚುಗೊಂಡ ಮೊದ ಮೊದಲ ದಿನಗಳಲ್ಲಿಯೇ ಕನ್ನಡ ಕೂಡ ಇಂಟರ್ ನೆಟ್ ನಲ್ಲಿ ಅಂಬೆಗಾಲಿಟ್ಟು ನಡೆಯಲು ಆರಂಭಿಸಿ ಬೇಗನೇ ವೇಗ ವೃದ್ಧಿಸಿಕೊಂಡಿತು. ಕನ್ನಡ ಬ್ಲಾಗರುಗಳು ಗುಂಪುಗಳನ್ನ ರಚಿಸಿಕೊಂಡು ಅಂತರ್ಜಾಲದಲ್ಲಿ ಕನ್ನಡ ಬಳಕೆಯನ್ನು ಹೆಚ್ಚಿಸುವ ಬಗ್ಗೆ ಚರ್ಚೆಗಳನ್ನೂ ನಡೆಸಿದ್ದರು! ಇಷ್ಟಾಗಿಯೂ ಬಹುಮಂದಿ ಕನ್ನಡವನ್ನು ಬರೆಯುವ, ಬಳಸುವ ಕುರಿತು ಮೌನವನ್ನು ಹೊಂದಿದ್ದಂತೂ ಸುಳ್ಳಲ್ಲ. ಕನ್ನಡ ಬರೆಯುವ ತಂತ್ರಾಶಗಳ ಕುರಿತ ಗೊಂದಲ, ಸುಮ್ಮನೆ ರಗಳೆ ಯಾಕೆ ಎಂಬ ಮನೋಧರ್ಮವೇ ಇದಕ್ಕೆ ಕಾರಣ ಎನ್ನುವುದು ಸುಳ್ಳಂತೂ ಅಲ್ಲ.

ಆದರೆ ಯಾವಾಗ ಫೇಸ್ ಬುಕ್ ಎಂಬ ವೆಬ್ ಸೈಟು ಉಳಿದೆಲ್ಲ ಜಾಲತಾಣಗಳನ್ನು ನುಂಗಿ ನೊಣೆಯುವ ಮಟ್ಟಕ್ಕೆ ಬೆಳೆಯಿತೋ, ಎಲ್ಲವೂ ಅತ್ಯಂತ ವೇಗವಾಗಿ ಬದಲಾಗಿ ಹೋಯಿತು. ಅದರ ಜೊತೆ ಜೊತೆಗೇ ಆದ ಇನ್ನೊಂದು ಬದಲಾವಣೆ, ಹೊಸ ಮೊಬೈಲ್ ತಂತ್ರಜ್ಞಾನದ ಆವಿಷ್ಕಾರ! ಆಂಡ್ರಾಯ್ಡ್ ತಂತ್ರಾಶ ಬಂದು ನೂತನ ರಂಗಸಜ್ಜಿಕೆಯೇ ಸಿದ್ಧವಾಗಿ ಹೋಯಿತು. ಕನ್ನಡ ಭಾಷೆಯನ್ನ ಮೊಬೈಲ್ ಮೂಲಕ ಜಾಲತಾಣಗಳಲ್ಲಿ ಬಳಸುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿತು. ಇಂದು ೬೬ ವರ್ಷದ ನನ್ನ ಅಪ್ಪ ಕೂಡ ಲೀಲಾಜಾಲವಾಗಿ ಕನ್ನಡವನ್ನು ಮೊಬೈಲ್ ನಲ್ಲಿ ಬಳಸುತ್ತಿದ್ದಾರೆ ಮತ್ತು ಫೇಸ್ ಬುಕ್ ಸ್ಟೇಟಸ್ ಗಳನ್ನು ಅಪ್ ಡೇಟ್ ಮಾಡುತ್ತಿದ್ದಾರೆ ಎಂದರೆ, ಅದಕ್ಕೆ ಈ ಹೊಸ ಆವಿಷ್ಕಾರಗಳೇ ಕಾರಣ!

ಕನ್ನಡ ಭಾಷೆ ಈ ಎಲ್ಲ ಕಾರಣಗಳಿಂದ ಇಂದು ಅಂತರ್ಜಾಲದಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಕಂಡುಕೊಂಡಿದೆ. ಕನ್ನಡವನ್ನು ಬರೆಯುವ ಸರಳ ಆಪ್ ಗಳಿಂದಾಗಿ ಬಹುಮಂದಿ ಟ್ವಿಟರ್, ಫೇಸ್ ಬುಕ್ ಗಳಲ್ಲಿ ಕನ್ನಡದಲ್ಲೇ ಬರೆಯುತ್ತಿದ್ದಾರೆ. ಕನ್ನಡವನ್ನು ಉಳಿಸಿ ಬೆಳೆಸುವ ಉದ್ದೇಶವನ್ನು ಹೊಂದಿರುವ ಬಹುಮಂದಿ ಈ ಜಾಲತಾಣಗಳಲ್ಲೇ ಒಂದಾಗಿದ್ದಾರೆ. ಕನ್ನಡದ ಕಾಳಜಿ ಇರುವ ಬೇರೆ ಬೇರೆ ಸ್ಥರಗಳಲ್ಲಿರುವ ಜನರನ್ನ ಈ ಜಾಲತಾಣಗಳು ಒಗ್ಗೂಡಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ ದೈನಿಕ ಜಗತ್ತಿನ, ಅತಿ ಸಾಮಾನ್ಯ ವಿಷಯಗಳ ಕುರಿತು ಕನ್ನಡದಲ್ಲಿಯೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕಥೆಕವನಗಳಿಂದಾಚೆಗೆ ಕನ್ನಡವನ್ನು ಅಂತರ್ಜಾಲದಲ್ಲಿ ಬಳಸುವ ಕ್ರಿಯೆ ಆರಂಭವಾಗಿದೆ! ಈ ಮೂಲಕ ಮುಂದಿನ ತಲೆಮಾರಿನಿಂದಾಚೆಗೆ ಕನ್ನಡವು ಕಾಣೆಯಾಗಬಹುದೇನೋ ಎನ್ನುವ ಭಯವು ಸಣ್ಣಗೆ ದೂರಾಗುತ್ತಿದೆ.

ಫೇಸ್ ಬುಕ್ ನಲ್ಲೇ ನೋಡಿದಾಗ, ಕನ್ನಡದ ಏಳಿಗೆಗಾಗಿ ಶ್ರಮಿಸುತ್ತಿರುವ ಹಲವು ಮಂದಿ ಕಾಣಿಸುತ್ತಾರೆ. ಗಾಂಚಾಲಿ ಬಿಡಿ ಕನ್ನಡ ಮಾತಾಡಿ, ಪದಾರ್ಥ ಚಿಂತಾಮಣಿ ಮೊದಲಾದ ಪುಟಗಳು ಕನ್ನಡದ ಬೆಳವಣಿಗೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿವೆ. ಕನ್ನಡ ಸಾಹಿತ್ಯ-ಕಥೆ ಕವನಗಳ-ಕಾದಂಬರಿಗಳ, ಕನ್ನಡದ ಹಳೆಯ ಅಮೂಲ್ಯ ಕೃತಿಗಳ ಬಗ್ಗೆ ಚರ್ಚೆ ಮಾಡುವ ಹಲವು ಪುಟಗಳು ಇಲ್ಲಿವೆ.

ಜತೆಗೆ, ಇನ್ನೊಂದು ಮುಖ್ಯ ಬೆಳವಣಿಗೆಯಲ್ಲಿ ಹಲವಾರು ಹೊಸ ಕನ್ನಡ ಜಾಲತಾಣಗಳು ಕೂಡ ಹುಟ್ಟಿಕೊಳ್ಳುತ್ತಿವೆ. ಹೊಸ ಹುಡುಗರು, ಹೊಸ ಉತ್ಸಾಹದೊಡನೆ ಉತ್ತಮ ದರ್ಜೆಯ ವೆಬ್ ಸೈಟ್ ಗಳನ್ನು ಆರಂಭಿಸುತ್ತಿದ್ದಾರೆ. ರಾಜಕೀಯ-ಕ್ರೀಡೆ-ವಿಜ್ಞಾನ-ಕೃಷಿ ಹೀಗೆ ವಿವಿಧ ವಿಚಾರಗಳನ್ನು ಹೊತ್ತ ತಾಣಗಳನ್ನ ನಾವೀಗ ಕಾಣಬಹುದು. ಹೀಗಾಗಿ, ಬಗೆಬಗೆಯ ಸುದ್ದಿಗಳು ಕನ್ನಡದಲ್ಲಿಯೇ ದೊರಕುವಂತಾಗಿದೆ. ನಮ್ಮ ನಡುವಿನ ಸಾಧಕರನ್ನು, ವಿಶೇಷ ಪ್ರತಿಭೆ ಹೊಂದಿರುವ ಮಂದಿಯನ್ನು ಈ ತಾಣಗಳು ಜನರಿಗೆ ಪರಿಚಯಿಸುತ್ತಿವೆ. ದಿನಪತ್ರಿಕೆಗಳು, ಟೀವಿ ಮಾಧ್ಯಮಗಳಂತೆಯೇ ವೆಬ್ ಪೋರ್ಟಲ್ ಗಳೂ ಕೂಡ ಬೆಳೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಸಿದ್ಧಿಯನ್ನು ಹೊಂದುವುದರಲ್ಲಿ ಯಾವ ಅನುಮಾನವೂ ಇಲ್ಲ.

ಕೇವಲ ಬರವಣಿಗೆಯಲ್ಲಿ ಮಾತ್ರವಲ್ಲ- ಯೂಟ್ಯೂಬ್ ನಂತಹ ಜಾಲತಾಣಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡದ ಕಿರುಚಿತ್ರಗಳು-ಹಾಡುಗಳು- ಸಿನಿಮಾಗಳು ಎಲ್ಲೆಡೆಗೆ ಹಬ್ಬುತ್ತಿದೆ. ಜಾಗತಿಕ ಮಟ್ಟದಲ್ಲಿ ಕನ್ನಡ ಪ್ರತಿಭೆಗಳನ್ನ ಎಲ್ಲರೂ ಗುರುತಿಸುವ ಕೆಲಸ ಆರಂಭವಾಗಿದೆ. ಹೊಸ ವಿಧದ ಮನರಂಜನೆಗಳೂ ನಮ್ಮವರಿಗೆ ದಕ್ಕುತ್ತಿವೆ. ಕನ್ನಡ ಸ್ಟಾಂಡ್ ಅಪ್ ಕಾಮಿಡಿ, ಚಲನಚಿತ್ರ ವಿಮರ್ಶೆಗಳ ವೀಡಿಯೋಗಳು, ಕನ್ನಡ ರ್ಯಾಪ್ ಹಾಡುಗಳು- ಹೀಗೆ ನವಪ್ರಪಂಚವೊಂದು ಕನ್ನಡದ ನೋಡುಗರಿಗೆ ದಕ್ಕುತ್ತಿದೆ. ಹೊಸ ಅಲೆಯ ಚಿತ್ರಗಳನ್ನು- ಡಾಕ್ಯುಮೆಂಟರಿಗಳನ್ನು ಮಾಡುವ ಮಂದಿಯ ಮಧ್ಯೆ ಕನ್ನಡದ ಹುಡುಗರನ್ನೂ ಕೂಡ ಗುರುತಿಸಲಾಗುತ್ತಿದೆ. ದಿನವೂ ಒಂದಲ್ಲ ಒಂದು ಹೊಸ ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಗೊಳ್ಳುತ್ತಲೇ ಇರುತ್ತದೆ.  ಕರ್ನಾಟಕದ ಯಾವುದೋ ಮೂಲೆಯಲ್ಲಿ ಕೂತಿರುವ ಉತ್ತಮ ಹಾಡುಗಾರ್ತಿಯೊಬ್ಬಳು ದಿನ ಬೆಳಗಾಗುವುದರೊಳಗಾಗಿ ವಿಖ್ಯಾತಳಾಗುತ್ತಾಳೆ. ಹೀಗೆ ಕನ್ನಡ ದಿನೇ ದಿನೇ ತನ್ನನ್ನು ತಾನು ಉತ್ತಮಗೊಳಿಸಿಕೊಳ್ಳುತ್ತಿದೆ.

ಆದರೆ ಬೀಸಿಬರುವ ಗಾಳಿಯು ಪರಿಮಳದ ಜೊತೆಗೆ ಕೆಲಬಾರಿ ಅಸಹನೀಯ ಗಂಧವನ್ನೂ ತಂದೀತು. ಸಾಮಾಜಿಕ ಜಾಲತಾಣದಲ್ಲಿನ ಕನ್ನಡ ಬಳಕೆಯ ವಿಚಾರದಲ್ಲೂ ಇದು ಹೊರತಲ್ಲ. ಕನ್ನಡ ಭಾಷೆಯ ಸಾವಿರಾರು ವರುಷಗಳ ಇತಿಹಾಸವನ್ನು, ಅದಕ್ಕಿರುವ ಶಾಸ್ತ್ರೀಯ ಅಡಿಪಾಯವನ್ನು ಕಡೆಗಣಿಸಿ, ಹೊಸದೇನೋ ತಿರುಚುವಿಕೆಗಳನ್ನ ಇದೇ ಜಾಲತಾಣಗಳ ಸಹಕಾರದಿಂದ ಮಾಡುವ ಪ್ರಯತ್ನ ನಡೆಯುತ್ತಿದೆ. ಮಹಾಪ್ರಾಣಗಳ ಕತ್ತುಹಿಸುಕಿ, ಸಂಸ್ಕೃತ ಮೂಲದ ಶಬ್ದಗಳನ್ನು ಕೊಂದು ಹೊಸ ಅರ್ಥಹೀನ ಪದಗಳನ್ನು ಹುಟ್ಟುಹಾಕುವ ಕೆಲಸಕ್ಕೆ ಇಲ್ಲೇ ಪ್ರಚಾರವು ದೊರಕುತ್ತಿದೆ. ಫೇಸ್ ಬುಕ್ ನಂತಹ ವೆಬ್ ಸೈಟ್ ಗಳ ಕನ್ನಡ ಪುಟಗಳಲ್ಲಿ ಈಗಾಗಲೇ ಇಂತಹ ಹಲ ಶಬ್ದಗಳು ತೂರಿಕೊಂಡಿರುವುದನ್ನು ಕೂಡ ಗಮನಿಸಬಹುದಾಗಿದೆ. ಇದರ ಜೊತೆಗೆ ಹಲವು ಟ್ರೋಲ್ ಪೇಜುಗಳಲ್ಲಿ, ಮೀಮ್ ಗಳಲ್ಲಿ ಕನ್ನಡವನ್ನು ಹೀಗಳೆಯುವ ಪ್ರಯತ್ನವನ್ನೂ ಕಾಣಬಹುದು. ಆದರೆ, ಕನ್ನಡದ ಹಿತಾಸಕ್ತಿಯನ್ನು ಕಾಪಾಡುವ ಮಂದಿಯೇ ಸಂಖ್ಯೆಯೇ ಜಾಸ್ತಿ ಇರುವುದರಿಂದ, ಅಂತಹ ತೊಂದರೆಯೇನೂ ಇಲ್ಲ! 

ಆಡುಮಾತಿನ ಕನ್ನಡವೇ ಶ್ರೇಷ್ಠ, ಗ್ರಾಂಥಿಕ ಕನ್ನಡ ಅರ್ಥಹೀನ,ಅ-ಹ ಕಾರಗಳ ತಪ್ಪು ಬಳಕೆಯು ಸರಿ ಎನ್ನುವ ಹಾಹಾಕಾರಕ್ಕೂ ಈ ಸೋಶಿಯಲ್ ಮೀಡಿಯಾ ವೇದಿಕೆಯಾಗುತ್ತಿದೆ. ಭಾಷೆಯ ಅಪಭ್ರಂಶ ಬಳಕೆಯನ್ನು ಸಮರ್ಥಿಸಿಕೊಳ್ಳುವ, ’ಏನೀಗ-ನಾನ್ ಕನ್ನಡನೇ ಬರೀತಾ ಇದೀನಿ, ಅದೇ ಬಹಳ ದೊಡ್ಡ ವಿಷಯ,ತಪ್ಪು ಬರೆದರೆ ಏನಂತೆ’ ಎನ್ನುವ ಮೊಂಡುವಾದವೂ ಇಲ್ಲಿ ಕಾಣುತ್ತಿದೆ. ಕನ್ನಡ ವ್ಯಾಕರಣವನ್ನೇ ಮೂಲೆಗೊತ್ತಿರುವ ನೂರಾರು ಕನ್ನಡ ಜಾಹೀರಾತುಗಳಂತೂ ಸಾಮಾನ್ಯ ಎನ್ನುವಷ್ಟವರ ಮಟ್ಟಿಗಾಗಿದೆ. ಇಂತಹ ವಿಷಯಗಳಿಂದ ಕನ್ನಡ ಭಾಷೆಯ ಗುಣಮಟ್ಟಕ್ಕೆ ಧಕ್ಕೆಯಾಗುವುದಂತೂ ಖಂಡಿತ. ಸುಳ್ಳನ್ನ ನೂರು ಬಾರಿ ಹೇಳಿದರೆ ಅದು ಸತ್ಯವೇ ಆಗಿ ಹೋಗುವಂತೆ, ಭಾಷೆಯ ತಪ್ಪು ಬಳಕೆಯೇ  ಖಾಯಂ ಆಗಿ ಹೋಗುವ ಅಪಾಯ ಇದೆ.

ಯಾವುದೇ ಭಾಷೆಯು ಬದಲಾವಣೆಗೆ ಒಗ್ಗಿಕೊಂಡು, ತನ್ನತನವನ್ನೂ ಉಳಿಸಿಕೊಂಡು ನಡೆದಾಗಲೇ ಅದರ ಏಳಿಗೆ ಸಾಧ್ಯ. ಕನ್ನಡ ಭಾಷೆಯು ಈ ಹೊಸಯುಗದಲ್ಲಿ ಅಂತರ್ಜಾಲಕ್ಕೆ ತನ್ನನ್ನ ಒಗ್ಗಿಸಿಕೊಂಡು ಮುನ್ನಡೆಯುತ್ತಿದೆ. ಆದರೂ, ಭಾರತದ ಇತರ ಪ್ರಾದೇಶಿಕ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಬೆಳವಣಿಗೆ ಕೊಂಚ ನಿಧಾನವೇ ಇರುವುದು ಸುಳ್ಳಲ್ಲ. ತಮಿಳು ತೆಲುಗು ಮಲಯಾಳಂ ಭಾಷೆಗಳ ಜಾಲತಾಣಗಳಿಗೆ, ಮೊಬೈಲ್ ಆಪ್ ಗಳಿಗೆ ಹೋಲಿಸಿದರೆ, ಕನ್ನಡ ಇನ್ನೂ ಕಲಿಯುವುದು ಬಹಳ ಇದೆ. ಅವರುಗಳ ಪಕ್ಕದಲ್ಲಿ ನಿಂತು ನೋಡಿದಾಗ, ಭಾಷೆಯನ್ನು ಸಮರ್ಥವಾಗಿ ದುಡಿಸಿಕೊಳ್ಳುತ್ತಿಲ್ಲ ಎನ್ನುವುದು ಅರಿವಾಗುತ್ತದೆ. ಕಿಂಡಲ್ ನಂತಹ ಪುಸ್ತಕಗಳನ್ನೋದುವ ಗ್ಯಾಡೆಜ್ಟ್ ಇನ್ನೂ ಪೂರ್ಣವಾಗಿ ಕನ್ನಡಕ್ಕೆ ಬೆಂಬಲ ನೀಡುತ್ತಿಲ್ಲ. ಬ್ಯಾಕಿಂಗ್ ಅಪ್ಲಿಕೇಶನ್ ಗಳಿಂದ ಹಿಡಿದು ಶಿಕ್ಷಣ, ವೈದ್ಯಕೀಯ, ಸಿನಿಮಾ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಜಾಲತಾಣ/ಆಪ್ ಗಳನ್ನ ಭಾರತದ ಇತರ ಹಲವು ಭಾಷೆಗಳು ಹೊಂದಿವೆ ಮತ್ತು ಅವುಗಳನ್ನು ಅಲ್ಲಿನ ಮಂದಿ ವ್ಯಾಪಕವಾಗಿ ಬಳಸುತ್ತಿದ್ದಾರೆ. ಹೀಗಾಗಿ, ಭಾಷಾಪ್ರೇಮದ ವಿಚಾರ ಬಂದಾಗ, ಕನ್ನಡಿಗರು ಸ್ವಲ್ಪ ಹಿಂದಿದ್ದಾರೇನೋ ಎನ್ನುವ ಅನುಮಾನ ಕಾಡುತ್ತದೆ.

ಏನೇ ಇದ್ದರೂ, ಕನ್ನಡಕ್ಕೆ ಸಾಮಾಜಿಕ ಜಾಲತಾಣಗಳಿಂದಾಗಿ ಹೊಸ ಆಯಾಮ ದೊರಕಿರುವುದಂತೂ ಸುಳ್ಳಲ್ಲ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಾವೆಲ್ಲ ಕನ್ನಡವನ್ನು ಸಮರ್ಪಕವಾಗಿ ಮತ್ತು ಸಮರ್ಥವಾಗಿ ಬಳಸಿದಲ್ಲಿ ಭಾಷೆಯ ಜೊತೆಗೆ ನಮ್ಮ ಬೆಳವಣಿಗೆಯೂ ಸಾಧ್ಯವಿದೆ!


ಬಾಕ್ಸ್ 1
ಕನ್ನಡ ಗೊತ್ತಿಲ್ಲ
ಕನ್ನಡ ಗೊತ್ತಿಲ್ಲ  ಎನ್ನುವ ವೆಬ್ ಸೈಟ್ ಮಾಡಿಕೊಂಡಿರುವ ಗುಂಪೊಂದು ವಾಟ್ಸಾಪ್ ಗ್ರೂಪ್ ಮೂಲಕ ಕನ್ನಡ ಬಾರದ ಪರದೇಶದ-ರಾಜ್ಯದ ಮಂದಿಗೆ ಕನ್ನಡ ಕಲಿಸುವ ಕೆಲಸ ಮಾಡುತ್ತಿದೆ. ಈಗಾಗಾಲೇ ಸಾವಿವಾರು ಮಂದಿ ಕನ್ನಡವನ್ನು ನಿತ್ಯದ ವ್ಯವಹಾರಕ್ಕಾಗಿ ಈ ಗ್ರೂಪ್ ಮೂಲಕ ಕಲಿತುಕೊಳ್ಳುತ್ತಿದ್ದಾರೆ.  ಕನ್ನಡದ ಸರಳ ವ್ಯಾಕರಣ, ಸುಲಭದ ಸಾಲುಗಳನ್ನು ಯಾರು ಬೇಕಿದ್ದರೂ ಅಗತ್ಯವಿರುವ ಮಂದಿಗೆ ಹೇಳಿಕೊಡಬಹುದು. ಸಂಪೂರ್ಣ ಸ್ವಯಂಸೇವೆಯ ಮಾದರಿಯಲ್ಲಿರುವ ಈ ತಂಡವನ್ನು ಕನ್ನಡವನ್ನು ಬೆಳೆಸುವ ಆಸಕ್ತಿ ಇರುವ ಯಾರು ಬೇಕಿದ್ದರೂ ಸೇರಿಕೊಳ್ಳಬಹುದು! ಅನೂಪ್ ಮಯ್ಯ ಎಂಬ ಉತ್ಸಾಹಿ ತರುಣ ಆರಂಭಿಸಿರುವ ಈ ಪ್ರಯತ್ನಕ್ಕೆ ಇದೀಗ ಎರಡು ವರುಷಗಳಾಗಿವೆ. ಹೆಚ್ಚಿನ ಮಾಹಿತಿಗೆ
Kannadagottilla.com ನೋಡಿ.

ಬಾಕ್ಸ್ 2
ಗಾಂಚಾಲಿ ಬಿಡಿ ಕನ್ನಡ ಮಾತಾಡಿ
ಪ್ರಾಯಶಃ ಫೇಸ್ ಬುಕ್ ನಲ್ಲಿ ಬಹಳ ಸದ್ದು ಮಾಡಿದ ಮೊದಲ ಕನ್ನಡ ಪುಟ ಗಾಂಚಾಲಿ ಬಿಡಿ ಕನ್ನಡ ಮಾತಾಡಿ. ಕನ್ನಡವನ್ನು ಹೀಗಳೆಯುವ ಮಂದಿಗೆ ಸೂಜಿಚುಚ್ಚುವ ಕೆಲಸವನ್ನು ನಾಜೂಕಾಗಿಯೇ ಮಾಡಿದೆ, ಈ ಪುಟ. ಕನ್ನಡ ಭಾಷೆಯ ಮಹತ್ವವನ್ನು, ಕನ್ನಡವನ್ನು ಮಾತನಾಡುವುದು ಖಂಡಿತ ಅವಮಾನವಲ್ಲ ಎಂಬ ಸಂದೇಶವನ್ನು ಕಿರುಚಿತ್ರಗಳ ಮೂಲಕ ಸಮರ್ಥವಾಗಿ ನೀಡಿರುವುದು ಇವರ ಹೆಗ್ಗಳಿಕೆ.
ಪುಟ: https://www.facebook.com/GBKMofficial                 

ಬಾಕ್ಸ್ 3:
ಕನ್ನಡ ಟೀಶರ್ಟ್ ಗಳು
ಕನ್ನಡಿಗರಿಗೆ ಕನ್ನಡದ್ದೇ ಕೋಟ್ಸ್ ಇರುವ ಟೀ ಶರ್ಟ್ ಗಳನ್ನು ಹೊರತರುವ ಕೆಲಸವನ್ನು ಕೆಲಮಂದಿ ಮಾಡುತ್ತಿದ್ದಾರೆ. ಕನ್ನಡ ಭಾಷೆಯ, ಸಂಸ್ಕೃತಿಯ ಕುರಿತ ಕವನದ ಸಾಲುಗಳಿಂದ ಮೊದಲುಗೊಂಡು ಮೋಜಿನ, ಕಾಲೆಳೆಯೋ ತಮಾಷೆಯ ತಲೆಬರಹಗಳವರೆಗೆ, ಎಲ್ಲವೂ ಇಲ್ಲಿ ಲಭ್ಯ. Iruve.in, aziteez.com – ನ ಹೊಕ್ಕು ನೋಡಿದರೆ ಇಂತಹ ಹಲ ಟಿ-ಶರ್ಟ್ ಗಳು ಕಾಣಿಸುತ್ತವೆ.


ವಿಜಯವಾಣಿಯ ವಿಜಯ ವಿಹಾರದಲ್ಲಿ ಪ್ರಕಟಿತ. (೨೦-೧೧-೨೦೧೬) 


ಸೋಮವಾರ, ನವೆಂಬರ್ 17, 2014

ಭೋಜನ ಪರ್ವ


 ಹೊಲಿದ ಬಾಯಿಯ ತೆರೆಸುವುದು
ಕಷ್ಟ, ಯಾವ ಬಾಗಿಲು ತೆರೆಯೇ
ಸೇಸಮ್ಮಗಳೂ ಮಾಡುವುದಿಲ್ಲ ಚಮತ್ಕಾರ
ಚಂದಮಾಮ ಗುಬ್ಬಿ ಚಿಟ್ಟೆ ನವಿಲುಗಳಿಗೂ
ಇಲ್ಲ ಪುರಸ್ಕಾರ
ಬೇಡವೆಂದ ಮೇಲೆ ಬೇಡ ಅಷ್ಟೇ.

ಬಿಗಿದ ಬಾಯಿಯೊಳಗಿಂದ
ಕೆಳಗಿಳಿದಿಲ್ಲ ಹಳೆಯ ತುತ್ತು
ಕಥೆಗಳೆಲ್ಲ ಖರ್ಚಾಗಿ
ಓಲೈಸುವಿಕೆ ಮುಗಿದು
ಧ್ವನಿ ಏರಿದರೂ
ಕಣ್ಣು ಕೆಂಪಾದರೂ
ಜಗ್ಗದ ದಿಗ್ಗಜೆ.

ದ್ರಾವಿಡ ಪ್ರಾಣಾಯಾಮಗಳು
ಮುಗಿದು ಮಗಳು
ಇನ್ನು ಉಣ್ಣುವುದಿಲ್ಲ
ಎಂದು ಖಾತರಿಯಾದ ಮೇಲೆ
ಬಟ್ಟಲು ನೋಡಿಕೊಂಡು ಸುಳ್ಳು
ಸಮಾಧಾನ, ಅಮ್ಮನಿಗೆ
ನಿನ್ನೆಗಿಂತ ಕೊಂಚೆ ಹೆಚ್ಚೇ ಉಂಡಿದ್ದಾಳೆ
ಸಂಜೆ ಹೊಟ್ಟೆಗೆ ಬೇರೇನೋ ಹೋಗಿದೆ

ಕೊನೆಗೊಮ್ಮೆ ಏಳುವ ಮುನ್ನ
ಇನ್ನೊಂದು ವಿಫಲ ಪ್ರಯತ್ನ
ಯಾವ ಪಾಸ್ ವರ್ಡು ಹಾಕಿದರೂ
ಓಪನಾಗದ ಲಾಕು,
ಎಲ್ಲ ಅನುನಯದ ಕೀಗಳನೂ ಬಿಸಾಕು
ಸಿಂಕಿನಲಿ ಕುಕ್ಕಿದ ತಟ್ಟೆಯ ಸದ್ದು
ಕೇಳಿದೊಡನೆಯ, ಬಾಯ್ದೆರೆದು
ನಕ್ಕು ತಟ್ಟಿದ ಚಪ್ಪಾಳೆಗೆ
ಬ್ರಹ್ಮಾಂಡ ದರ್ಶನ.


ಬುಧವಾರ, ನವೆಂಬರ್ 05, 2014

ಎಮ್ಮ ಮನೆಯಂಗಳದಿ..


ಒಂದು ದಿನ ಸಂಜೆಯ ಹೊತ್ತಿಗೆ ಗಾಂಧಿಬಜಾರಿನ ಗಿಜಿಗುಡುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನನಗೆ ಅಚಾನಕ್ಕಾಗಿ ಆ ಮನೆ ಕಣ್ಣಿಗೆ ಬಿತ್ತು. ಥಳಥಳ ಹೊಳೆಯುವ ಬೋರ್ಡುಗಳು, ಬಗೆ ಬಗೆಯ ಬೆಳಕುಗಳ ಬೆರಗಲ್ಲಿ ಅದ್ದಿ ತೆಗೆದ ರಸ್ತೆ ಕಟ್ಟಡಗಳು ಮತ್ತು ಮನುಷ್ಯರು.. ದೊಡ್ಡದನಿಯಲ್ಲಿ ಕರೆಯುವ ರಸ್ತೆಯಂಚಿನ ವ್ಯಾಪಾರಿಗಳು, ಫುಟ್ ಪಾತಿನಲ್ಲೇ ಮದುಮಗಳಿಗೆ ಮೆಹಂದಿ ಹಚ್ಚುತ್ತಿರುವ ಪ್ರಚಂಡ ಕಲಾಕಾರರು, ಬಣ್ಣಬಣ್ಣದ ಬಲೂನುಗಳನ್ನು ಎಲ್ಲರ ನೆತ್ತಿಯ ಮೇಲೆತ್ತಿ ಸಾಗುತ್ತಿರುವ ವ್ಯಾಪಾರಿ.. ಗಾಜಿನ ಹಿಂದೆ ಹೊಸ ಬಟ್ಟೆ ತೊಟ್ಟರೂ ಸುಮ್ಮನೆ ನಿಂತಿರುವ ಗೊಂಬೆಗಳು, ಇವನ್ನೆಲ್ಲ ನೋಡುತ್ತ ಹೋಗುತ್ತಿದ್ದವನಿಗೆ ಆ ಮನೆ ಕಾಣಿಸಿತು.  ಸುತ್ತಲಿನ ಚಿತ್ರಣವನ್ನು ಅಣಕಿಸಲೋ ಎಂಬಂತೆ ಯಾವನೋ ಮಾಯಗಾರನು ಮಲೆನಾಡಿನ ಹಳ್ಳಿಯೊಂದರಿಂದ ಕತ್ತರಿಸಿ ತಂದಿಟ್ಟಂತೆ ಆ ಮನೆ,  ಅಲ್ಲಿ- ಆ ಗಾಂಧಿಬಜಾರಿನ ಮುಖ್ಯ ರಸ್ತೆಯ ಗದ್ದಲದೊಳಗೆ ಸದ್ದಿಲ್ಲದೇ ಇತ್ತು. ಮನೆಯ ಮುಂದೊಂದು ಅಂಗಳ. ಅಲ್ಲೊಂದಿಷ್ಟು ಹೂ ಗಿಡಗಳು.. ಅಂಗಳದ ಹುಲ್ಲಿನ ಮೇಲೆ ಕೂತು ಹರಟೆ ಹೊಡೆಯುತ್ತಿದ್ದ ಅಮ್ಮ ಮಗಳು. ಸ್ಕ್ವೇರ್ ಫೀಟುಗಳಲ್ಲಿ ಭೂಮಿಯನ್ನು ಬಂಧಿಸುವ ಈ ಕಾಲದಲ್ಲಿ ಅಂಗಳವೆಂಬ ಅವಕಾಶ ಅಂಥ ಕಡೆ ಕಂಡದ್ದು ಅಚ್ಚರಿ ಮೂಡಿಸಿತ್ತು. ಬೆಂಗಳೂರಿನ ಕಿಷ್ಕಿಂಧೆಯಂತಹ ಇರುಕಿನಲ್ಲಿ ಇದೊಂದು ಬೇರೆಯೇ ಪ್ರಪಂಚದಂತೆ ಕಾಣಿಸಿತು!
ಅಂಗಳ ಅನ್ನುವ ಪುಟ್ಟ ಜಾಗ ಅದೆಂಥಹ ವೈವಿಧ್ಯಮಯ ವಿಷಯಗಳ ಆಶ್ರಯದಾಣ. ಮನೆಗೂ ಹೊರ ಪ್ರಪಂಚಕ್ಕೂ ಇರುವ ವಿಚಿತ್ರ ಕೊಂಡಿ ಈ ಅಂಗಳ. ಮನೆಯೆಂಬ ಆಶ್ರಯದಿಂದ ಜಗತ್ತೆಂಬ ಜಾಲಕ್ಕೆ ಕಾಲಿಡಬೇಕೆಂದರೆ ಮೊದಲು  ಮೀರಬೇಕಾದ್ದು ಅಂಗಳವನ್ನೇ. ಮನೆ ಗೆದ್ದು ಮಾರು ಗೆಲ್ಲಬೇಕೆಂದು ಹೊರಡುವವನಿಗೆ ಸಿಗುವ ಆರಂಭ ಅಂಗಳದಲ್ಲೇ. ಅಂಗಳವೆ ಡೊಂಕಾದರೆ, ಕುಣಿತ ಬಾರದು ಎಂದರ್ಥ, ಅಷ್ಟೇ, ಒಳಗೆ ಕಾಲಿಡುವವನಿಗೆ ಎಲ್ಲ ಕೊಳೆಯನ್ನು ಕೊಡವಿ ಸಾಗಲು, ಹೊರಗೆ ನಡೆಯುವವನಿಗೆ ಎಲ್ಲ ಸರಿಯಾಗಿದೆಯೇ ಎಂದು ನೋಡಿಕೊಳ್ಳಲು ಅಂಗಳವೇ ಜಾಗ. ಮೊದಲು ಕತ್ತಲಾಗುವುದು ಮನೆಯೊಳಕ್ಕಾದರೆ, ಮೊದಲು ಬೆಳಕಾಗುವುದು ಅಂಗಳಕ್ಕೆ! ಹುಟ್ಟಿನ ಸಂಭ್ರಮಕ್ಕೆ ಒಳಮನೆ ಸಾಕ್ಷಿಯಾದರೆ, ಸಾವಿನ ಸೂತಕಕ್ಕೆ ಅಂಗಳವೇ ಆಶ್ರಯ. ಒಳಗೆ ಯಾರು ಹೇಗೋ, ಆದರೆ ಬಯಲಂಥ ಅಂಗಳಕ್ಕೆ ಎಲ್ಲರೂ ಸಮಾನರೇ. ಆಳೂ ಅರಸನೂ ಜೊತೆಗೆ ನಿಂತು ಮಾತನಾಡಲು ಅಂಗಳದಲ್ಲಿ ಮಾತ್ರ ಸಾಧ್ಯ. ಮನೆಯೇ ಮೊದಲ ಪಾಠಶಾಲೆಯಾದರೆ, ಅಂಗಳವೇ ಮೊದಲ ಮೈದಾನ.ಮಲೆನಾಡ ಮನೆಗಳ ರಚನೆ ಗಮನಿಸಿದರೆ, ಮೇಲೆ ಮನೆಯೆಂಬ ಸ್ವರ್ಗ, ಮಧ್ಯೆ ಅಂಗಳವೆಂಬ ಮರ್ತ್ಯ, ಕೆಳಗೆ ತೋಟವೆಂಬ ಪಾತಾಳ!
ಬೇಸಗೆಯ ನನ್ನ ಅಜ್ಜನ ಮನೆಯ ಸಕಲ ಆಟಗಳಿಗೂ ಅಂಗಳವೇ ಹೆಡ್ಡಾಫೀಸಾಗಿತ್ತು. ಕಣ್ಣಾ ಮುಚ್ಚಾಲೆಯಿಂದ ತೊಡಗಿ, ಕಂಬಾಟದವರೆಗೂ ಅಂಗಳವೇ ನಮ್ಮ ಆಡುಂಬೊಲ! ನಮ್ಮ ಕೈಯ ನುಣುಪೆಲ್ಲ ಆ ಐಸ್ ಪೈಸ್ ಆಡುವ ಕಂಬಗಳಿಗೆ ಮೆತ್ತಿಕೊಂಡು, ಕಂಬಗಳ ಒರಟೆಲ್ಲ ನಮ್ಮ ಕೈಗಂಟಿಕೊಳ್ಳುವಷ್ಟು ಅಲ್ಲೇ ಆಟವಾಡುತ್ತಿದ್ದೆವು. ಒಂದಾಟ ಮುಗಿದ ಮೇಲೆ ಇನ್ನೊಂದು. ಕೂತು ಆಡುವ ಆಟ ಮುಗಿದರೆ, ನಿಂತಾಟ, ಮತ್ತೆ ಕುಣಿದಾಟ. ಚಪ್ಪರದೇಣಿಯೇ ಸಿಂಹಾಸನ, ಸಗಣಿ ಸಾರಿಸಿದ ನೆಲವೇ ವೇದಿಕೆ. ಅಡಿಕೆಯ ದಬ್ಬೆಯೇ ಶಿವಧನುಸ್ಸು, ವಜ್ರಾಯುಧ, ಟಿಪ್ಪೂಸುಲಾನನ ಕತ್ತಿ! ನಮ್ಮ  ಕುಣಿತಕ್ಕೆ ಕಂಗಾಲಾಗುವ ಅಜ್ಜಿ ಕಷ್ಟಪಟ್ಟು ಸಗಣಿ ಸಾರಿಸಿದ ನೆಲವೆಲ್ಲ ಕಿತ್ತು ಹೋಯಿತು ಎಂದು ಬೈದರೆ ನಮಗೆ ಪರಮಾನಂದ.ಏಕೆಂದರೆ ಮಾರನೇ ದಿನದ ಸಗಣಿ ಸಾರಿಸುವ ಕೆಲಸ ಎಲ್ಲ ಆಟಗಳಿಗೂ ಮಿಗಿಲು. ಕೊಟ್ಟಿಗೆಯಿಂದ ಸಗಣಿ ಬಾಚಿ ತಂದು, ಅದನ್ನ ಬಕೇಟಲ್ಲಿ ಕರಡಿ.. ಅದಕ್ಕೆ ಹಳೆಯ ಬ್ಯಾಟರಿ ಸೆಲ್ಲು ಗುದ್ದಿ ಒಳಗಿನ ಪುಡಿ ತುಂಬಿ, ಅಂಗಳದ ತುಂಬ ಸಗಣಿ ನೀರು ಚೆಲ್ಲಿ ಗುಡಿಸುವ ಮಜವೇ ಬೇರೆ. ಇಷ್ಟೆಲ್ಲ ಮಾಡಿದ ಮೇಲೆ ಸಗಣಿ ಒಣಗುವ ಪುರುಸೊತ್ತೂ ಕೊಡದೇ ಇನ್ನೊಂದೇನೋ ಮಹಾಯುದ್ಧವನ್ನು ಅಲ್ಲಿಯೇ ಹಮ್ಮಿಕೊಂಡೂ ಆಗುತ್ತಿತ್ತು.
ಮೇ ತಿಂಗಳು ಬಂತೆಂದರೆ ಅಂಗಳಕ್ಕೆ ಭರ್ಜರಿ ಕೆಲಸ. ಅಂಗಳದ ಕುರುಚಲು ಕಳೆಯನ್ನೆಲ್ಲ ಕೆತ್ತಿ, ನೀಟಾಗಿ ಶೇವ್ ಮಾಡಿದ ಮುಖದಂತೆ ಫಳಫಳಿಸುವಂತೆ ಮಾಡಿದ ಮೇಲೆ ಚಾಪೆಗಳೆಲ್ಲ ಹೊರ ಬರುತ್ತವೆ. ಕರಿದು ತಿನ್ನುವ ಹುರಿದು ಮುಕ್ಕುವ ಸಕಲ ವಸ್ತುಗಳನ್ನೂ ಸಿದ್ಧಪಡಿಸುವ ಕಾಲ ತಾನೇ ಅದು? ಹಪ್ಪಳ ಸಂಡಿಗೆಗಳನ್ನು ಮಾಡುವವರ ಪಾಲಿನ ಅಮೋಘ ಮಿತ್ರ ಅಂಗಳ. ನಮ್ಮ ದೇಶದ ಅಂಗಳಗಳಲ್ಲಿ ಅದೆಷ್ಟು ಕೋಟಿ ಕೋಟಿ ಹಪ್ಪಳಗಳು ಬಿಸಿಲಿಗೆ ತಮ್ಮನ್ನು ಸುಟ್ಟುಕೊಂಡಿವೆಯೋ ಏನೋ! ನನ್ನಪ್ಪ ಪ್ರತಿ ವರ್ಷವೂ ಕರ್ತವ್ಯವೆಂಬಂತೆ ಹಲಸಿನ ಕಾಯಿ ಕೊಯ್ಯುವುದು,ಆಮೇಲೆ ನಾವು ಅಣ್ಣತಂಗಿ ಅಪ್ಪ ಸೇರಿ ಆ ಹಲಸಿನ ಕಾಯಿಯ ಮೈ ಹಿಸಿದು ಅಂಗಳದಲ್ಲೇ ಕೆತ್ತಿ ಸೊಳೆಗಳನ್ನ ಬಿಡಿಸುವುದು, ಅಮ್ಮ ಉಳಿದ ಸಕಲ ಸಂಸ್ಕಾರಗಳನ್ನು ನೆರವೇರಿಸಿ ಹಪ್ಪಳ ಮಾಡುವುದು ಹಲ ಕಾಲ ನಡೆದು ಬಂದ ಸಂಪ್ರದಾಯ. ಬಿಸಿಲಿಗೆ ನಾಯಿ ಕಾಗೆಗಳನ್ನೋಡಿಸುವ ನೆಪದಲ್ಲಿ, ಅಲ್ಲೇ ಕೂತು ಹಸಿ ಹಪ್ಪಳ ತಿನ್ನುವ ರುಚಿಯನ್ನು ಇಲ್ಲಿ ವರ್ಣಿಸಲು ಯಾವ ಪದಗಳೂ ಇಲ್ಲ. ಅಂಗಳ ದೊಡ್ಡದಾದಷ್ಟೂ ಅಕ್ಕಪಕ್ಕದವರ ಕಣ್ಣು ಬೀಳುವುದೂ ಜಾಸ್ತಿ. ಏಕಕಾಲದಲ್ಲಿ ಹೆಚ್ಚು ಹಪ್ಪಳಗಳನ್ನ ಒಣಗಿಸಿಕೊಳ್ಳಬಹುದೆಂಬ ಸಾಧನೆಯೇನು ಕಡಿಮೆಯೇ?
ಮಳೆಗಾಲದ ಮೋಡಗಳು ದಟ್ಟೈಸಿಕೊಳ್ಳುವ ಮೊದಲು ಎಲ್ಲವನ್ನೂ ಕಳಚಿಕೊಂಡು ಆಗಸಕ್ಕೆ ನೇರ ಮುಖ ಮಾಡಿಕೊಳ್ಳಬೇಕಾದ್ದು ಅಂಗಳದ ಕರ್ಮ. ಮಲೆನಾಡಿನಲ್ಲಾದರೆ ಅಡಿಕೆಯ ಸೋಗೆಗಳೂ, ಕರಾವಳಿಯಲ್ಲಿ ತೆಂಗಿನ ಮಡಲುಗಳೂ ಮತ್ತೆ ಕೊಟ್ಟಿಗೆಯಟ್ಟ ಸೇರಿದರೆ, ಬತ್ತಲು ಕಂಬಗಳು ಮಾತ್ರ ದೀನ ದಿಗಂಬರರಂತೆ ಮಳೆ ಹೊಡೆತಕ್ಕೆ ಸಿದ್ಧವಾಗಿ ನಿಲ್ಲುತ್ತವೆ. ಅಡಿಕೆ ಮರವನ್ನು ಸೀಳಿ ಮಾಡಿದ ಟೆಂಪರರಿ ಕಾಲುಹಾದಿ ದಣಪೆಯಿಂದ ಮನೆಯವರೆಗೆ. ಹೊರಲೋಕದಿಂದ ಒಳನಾಕಕ್ಕೆ.ಮಳೆ ನೀರು ಹಂಚಿಂದ ಬಿದ್ದು ನೆಲ ಹಾಳಾಗಬಾರದೆಂದು ಕೆಳಗೆ ಮುಚ್ಚಿಕೊಂಡಿರುವ ಸೊಪ್ಪು,ಸೋಗೆಗಳು. ಅದೇ ಹೊತ್ತಿಗೆ, ನೆಲದಾಳದಲ್ಲಿ ಎಲ್ಲಿರುತ್ತವೋ ಏನೋ.. ಸಾವಿರ ಸಾವಿರ ಸಂಖ್ಯೆಯಲ್ಲಿ ಅಂಗಳದ ಆಳದಿಂದ ಮೇಲೆದ್ದು ಬರುವ ಹಾತೆಗಳು ತಮ್ಮ ಆಗಮನದ ಜೊತೆಗೆ, ಮಳೆಯ ಆಗಮನವನ್ನೂ ಸಾರುತ್ತವೆ. ಅಂಗಳವನ್ನೆಲ್ಲ ಮುಚ್ಚುವಂತೆ ಬಿದ್ದಿರುವ ಆ ಹಾತೆಗಳ ರೆಕ್ಕೆಗಳು ಅಂದು ಸಂಜೆಯೋ, ಮಾರನೇ ದಿನ ಬೆಳಗ್ಗೆಯೋ ಬರುವ ಮಳೆಗೇ ಕೊಚ್ಚಿಕೊಂಡು ಹೋಗಬೇಕು! ಆ ಹೊತ್ತಿಗೆ ಹಿತ್ತಲಿನ ಬಚ್ಚಲ ಮನೆಯ ಸುತ್ತ ಕೂತು ಮಳೆ ಸದ್ದು ಕೇಳುತ್ತ ಹಲಸಿನ ಬೀಜವನ್ನೋ, ಗೇರು ಬೀಜವನ್ನೋ ಸುಟ್ಟುಕೊಂಡು ತಿನ್ನುತ್ತ ಕುಳಿತಿದ್ದರೆ, ಅಂಗಳ ಅನಾಥ.
ಆದರೆ ಇದೇ ಮಳೆಗಾಲದಲ್ಲಿಯೇ ಅಂಗಳದಲ್ಲಿ ಅಚ್ಚರಿಗಳೂ ಮೂಡುತ್ತವೆ. ಕಳೆದ ಮಳೆಗಾಲದಲ್ಲಿ ಹೂವಾಗಿ ಮರೆತು ಹೋಗಿದ್ದ ನಾಗದಾಳಿ ಗಿಡ, ಧುತ್ತೆಂದು ಅಲ್ಲೇ ಮೂಲೆಯಲ್ಲಿ ಮತ್ತೆ ಪ್ರತ್ಯಕ್ಷವಾಗಿ ಮಳೆಗೆ ಮುಖವೊಡ್ಡುತ್ತದೆ. ಇನ್ಯಾವುದೋ ಡೇರೇ ಹೂವಿನ ಗಿಡ ಗಡ್ಡೆಯಿಂದ ಮೂತಿ ಹೊರ ತೂರಿಸಿ ತಾನೂ ಇದ್ದೇನೆ ಎನ್ನುತ್ತದೆ. ಹೆಸರಲ್ಲಿದ ಹಳದಿ ಬಿಳಿ ಪುಟಾಣಿ ಹೂಗಳೂ ಜತೆ ಸೇರುತ್ತವೆ. ಬಣ್ಣ ಬಣ್ಣದ ಗೌರೀ ಹೂಗಳ ಗಿಡ, ಯಾವುದೋ ಹಕ್ಕಿಯುಪಕಾರದಿಂದ ಹುಟ್ಟಿದ ಟೊಮೇಟೋ ಗಿಡ, ಭತ್ತದ ಸಸಿ, ಎಲ್ಲ ಸಹಬಾಳ್ವೆ ಆರಂಭಿಸುತ್ತವೆ. ಅಂಗಳದಂಚಿನ ದಾಸವಾಳ ಗಾಳಿಗೆ ಇತ್ತಲೇ ಬಗ್ಗಿ ನಾನೂ ಇದ್ದೇನೆ ಎನ್ನುತ್ತದೆ. ಮನೆಯ ದಾರಿಯ ಅಡಿಕೆ ದಬ್ಬೆಯು ಶತಮಾನಗಳಿಂದ ಅಲ್ಲೇ ಇದ್ದೆ ಎನ್ನುವಂತೆ ಅಂಗಳಕ್ಕೆ ಒಗ್ಗಿಕೊಂಡೂ, ತಾನೂ ಅದೇ ಬಣ್ಣಕ್ಕೆ ತಿರುಗಿ, ಜಾರಬಾರದೆಂಬ ಉದ್ದೇಶಕ್ಕೆ ದಬ್ಬೆ ದಾರಿ ಮಾಡಿದ್ದಾದರೂ,ಅದೇ ನಮ್ಮನ್ನು ಜಾರಿಸಿ ಗೊಂದಲಕ್ಕೀಡುಮಾಡುತ್ತದೆ. ಕಂಬಳಿಕೊಪ್ಪೆಯ ಕೆಲಸದಾಳು ದಣಪೆಯನ್ನು ಸರಿಸುವಾಗಲೇ ಹುಷಾರು ಮಾರಾಯಾ ಎಂಬ ಬೊಬ್ಬೆ ಮನೆಯೊಳಗಿಂದ ಮಳೆಸೀಳಿಕೊಂಡು ಬರುತ್ತದೆ.
ಕರಾವಳಿಯ ಮಳೆಗಾಲದಲ್ಲಿ ಮನೆ ಬಾಗಿಲಿಗೆ ಬರುವ ಆಟಿ ಕಳಂಜವೆಂಬ ಜನಪದ ನೃತ್ಯದ ಸೊಗಸೂ, ಮಳೆಯ ಸದ್ದನ್ನೂ ಮೀರಿಸುವ ನೇಜಿ ನೆಡುವ ಹೆಂಗಸರ ಚಹಾದ ಜೊತೆಗಿನ ಕಿಲಕಿಲವು ನಡೆಯುವುದು ಅಂಗಳದಲ್ಲೇ. ಪತ್ರೊಡೆಗಳಾಗಿ ನಮ್ಮನ್ನ ಜಿಹ್ವಾಚಾಪಲ್ಯವನ್ನು ತೀರಿಸುವ ಕೆಸುವಿನೆಲೆಗಳ ಜನನವೂ ಇಲ್ಲಿಯೇ. ಬಣ್ಣಬಣ್ಣದ ಅಣಬೆಗಳೂ, ದಾರಿತಪ್ಪಿ ಬರುವ ದೊಡ್ಡ ಕಪ್ಪೆಗಳೂ ಅಂಗಳವನ್ನು ಅಲಂಕರಿಸುತ್ತವೆ.
ಇನ್ನು, ಮುತ್ತೈದೆಯ ಹಣೆಗೆ ತಿಲಕ ಇಟ್ಟಂತೆ, ಅಂಗಳಕ್ಕೆ ತುಳಸೀಕಟ್ಟೆ. ರಾತ್ರಿ ಆ ಕಟ್ಟೆಯಲ್ಲಿ ಮಿನುಗುವ ಪುಟ್ಟ ದೀಪವು ಅಂಗಳದ ನಕ್ಷತ್ರ! ಮಳೆಗಾಲದಲ್ಲಿ ತುಳಸಿಯ ದೀಪಕ್ಕೆ ಹೊಸ್ತಿಲೇ ಆಸರೆ. ಮಳೆ ಕಳೆದ ಮೇಲೆ ಬರುವ ಹಬ್ಬಗಳ ಜೊತೆಗೆ ಮತ್ತೆ ಹಣತೆಗೆ ತುಳಸಿಕಟ್ಟೆಯ ಸಖ್ಯ ಮರಳಿ ದೊರಕುತ್ತದೆ. ದೀಪಾವಳಿ ತುಳಸೀ ಪೂಜೆ, ಉತ್ಥಾನ ದ್ವಾದಶಿಯ ತುಳಸೀ ಮದುವೆಗೆ ಅಂಗಳದ್ದೇ ಪಾರುಪತ್ಯ.
ಮಲೆನಾಡಿನಲ್ಲಿ ಬಹಳ ಮದುವೆಗಳ ಮಂಟಪಗಳಿಗೆ ಅಂಗಳವೇ ಆಶ್ರಯದಾತ. ಮನೆಯೆದುರಿನ ಅಂಗಳಕ್ಕೆ ಖಡಕ್ಕು ಸಗಣಿಸಾರಿಸಿ, ಮಂಟಪ ಎಬ್ಬಿಸಿ ಚಪ್ಪರ ಹಾಕಿದರೆ, ಮದುವೆ ಗೌಜಿ! ಅಂಗಳ ದೊಡ್ಡಕ್ಕಿದ್ದಷ್ಟೂ ಖರ್ಚು ಜಾಸ್ತಿ ಮಾರಾಯಾ ಎನ್ನುವುದು ಇಲ್ಲಿನ ಖಾಯಂ ಮಾತು. ಮಳೆಗಾಲದ ಬತ್ತಲು ಕಂಬಗಳ ಮಾನವನ್ನು ಮಾವಿನೆಲೆಯು ಮುಚ್ಚುತ್ತದೆ, ಅಲ್ಲದೇ ಹೋದರೆ ಬಣ್ಣ ಬಣ್ಣದ ಕಾಗದಗಳ ಅಲಂಕಾರವಾದರೂ. ಹೋದ ಸೀಸನ್ನಿನಲ್ಲಿ ಅಡಕೆ ಒಣಗಿಸಿದ ತಟ್ಟಿಗಳೇ ಅಂಗಳದಂಚಿನ ತಾತ್ಕಾಲಿಕ ಗೋಡೆಗಳು. ಹೆಂಗಸರ ಕಪಾಟಿನ ಹಳೆಯ ಸೀರೆಗಳೇ ಚಪ್ಪರದ ತೂತನ್ನ ಮುಚ್ಚುವ ವಸ್ತ್ರಗಳು. ಊರಿನ ಮಂದಿಯೆಲ್ಲ ಕೂಡಿ ಓಡಾಡಿ ಕೆಲಸ ಮಾಡಿದರೆ ಎರಡು ದಿನದೊಳಗೆ ಕಂಬಳಿ ಹುಳ ಚಿಟ್ಟೆಯಾದ ಹಾಗೇ ಲೆಕ್ಕ! ಮನೆಯವರಿಗೇ ಅಂಗಳದ ಗುರುತು ಸಿಕ್ಕಲಾರದು.
ಮದುವೆಯ ಸಮಸ್ತ ತಯಾರಿಗಳಿಗೂ ಅಂಗಳವೇ ಗತಿ. ಪಕ್ಕದ ಮನೆ ಅಂಗಳದಲ್ಲಿ ಬಾಳೆ ಎಲೆಗಳನ್ನ ಕ್ಲೀನು ಮಾಡಿ, ತರಕಾರಿ ಕೊಚ್ಚಿದರೆ, ಮತ್ತೊಂದು ಮನೆಯಂಗಳದಲ್ಲಿ ಊಟದ ತಯಾರಿ. ಇನ್ಯಾರದೋ ಹಿತ್ತಲಲ್ಲಿ ಅಡುಗೆ. ಊರೊಟ್ಟಿನ ಕಂಬಳಿ ಟರ್ಪಾಲುಗಳೆಲ್ಲ ಮದುವೆ ಮಂಟಪವಿರುವ ಅಂಗಳದಲ್ಲಿದ್ದೇ ಸಿದ್ಧ. ಹೆಚ್ಚಾಗಿ ಉಳಿದವು ಸದಾ ಸೇವೆಗೆ ಸನ್ನದ್ಧ. ಒಂದು ಅಂಗಳದಲ್ಲಾದ ಮದುವೆಯ ಮುಂದಿನ ಅಂಕ ಮತ್ತೊಂದು ಅಂಗಳಕ್ಕೇ ವರ್ಗವಾಗುತ್ತದೆ. ಗೃಹಪ್ರವೇಶವೆಂಬ ಗಂಡಿನ ಮನೆಯ ಸಂಭ್ರಮಕ್ಕೆ ಮತ್ತೆ ಅಂಗಳವೇ ಸಾಕ್ಷಿ. ಅಲ್ಲಿ ಆರತಕ್ಷತೆಗೆ ಇನ್ನೊಂದಿಷ್ಟು ಅಲಂಕಾರಗಳು. ಹೆಣ್ಣಿನ ಹೊಸ ಬದುಕು ಆರಂಭವಾಗುವುದೇ ಅಲ್ಲಿ. ಹೊಸ ಊರು, ಹೊಸ ಜಾಗ ಹೊಸ ಮಂದಿಯ ಮಧ್ಯೆ ಪ್ರಾಯಶಃ ಆ ಅಂಗಳ ಮಾತ್ರವೇ ಹಳೆಯದು ಎನ್ನಿಸುವುದೋ ಏನೋ! ಮದುವೆಯ ಸಂಭ್ರಮಗಳೆಲ್ಲ ಮುಗಿದ ರಾತ್ರಿ ನೆರೆದ ಹತ್ತು ಸಮಸ್ತರ ಇಸ್ಪೀಟು ಮಂಡಲವೂ ಅದೇ ಚಪ್ಪರದ ಕೆಳಗೇ ನಡೆಯುತ್ತದೆ. ಅದೆಷ್ಟು ಸುಸ್ತಾದರೂ, ಕಣ್ಣೆಳೆದರೂ ಮಧ್ಯೇ ಮಧ್ಯೇ ಚಹಾಪಾನಂ ಮಾಡುತ್ತ ಬೆಳಗಿನವರೆಗೂ ಕಾರ್ಡುಗಳ ಕಲಸು ಮೇಲೋಗರ ನಡೆದೇ ನಡೆಯುತ್ತದೆ.ಅದೇ ಮಾರನೆಯ ದಿನದ ಚಳಿಬೆಳಗಲ್ಲಿ ಅಂಗಳದಲ್ಲಿ ರಂಗೋಲಿಯ ಚಿತ್ರಗಳನ್ನ ಬಿಡಿಸುತ್ತ ನವವಧುವು ತಾನೇ ಚಿತ್ರವಾಗುವ ಸೋಜಿಗವೂ ನಡೆಯುತ್ತದೆ. ಆಮೇಲೆ ನಾಲ್ಕು ದಿನ ಬಿಟ್ಟು, ಮದುವೆ ಚಪ್ಪರಕ್ಕೆ ಕಟ್ಟಿದ ಸೀರೆಗಳನ್ನು ಬಿಡಿಸಲು ಗಂಡನಿಗೆ ಅವಳೇ ನೆರವಾಗಬೇಕೋ ಏನೋ!
ಆಗ ನೆರವಾಗದೇ ಹೋದರೂ ಮುಂಬರುವ ಅಡಿಕೆ ಕೊಯ್ಲಲ್ಲಂತೂ ಹೇಗೂ ಆಗಲೇಬೇಕು. ಏಕೆಂದರೆ ಮಲೆನಾಡಿನಲ್ಲಿ ಅದು ಇಡಿಯ ಊರಿನ ಕೆಲಸ! ಹಸಿರು ಹಳದಿ ಅಡಿಕೆಗಳ ರಾಶಿ ರಾಶಿ ಗೊಂಚಲುಗಳು ಅಂಗಳವನ್ನು ತುಂಬಿಕೊಳ್ಳುವ ಪರಿಯೇ ಚಂದ. ಊರ ಮಂದಿಯೆಲ್ಲ ಒಂದಾಗಿ, ಹಗಲೆನ್ನದೆ, ರಾತ್ರಿಯೆನ್ನದೇ ಆ ಅಡಿಕೆಗಳನ್ನು ಸುಲಿಯುವ ಸಂಭ್ರಮಕ್ಕೆ ಸಾಟಿಯೇ ಇಲ್ಲ! ಅಂಗಳದ ಆಚೆಗೆ ಅದೇನೇ ಆಗಿದ್ದರೂ ಒಳಗೆ ಬಂದು ಕೂತ ಮೇಲೆ ಎಲ್ಲರೂ ಒಂದೇ ಇಲ್ಲಿ. ವಿದೇಶೀ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ, ವೀಕೆಂಡಿನಲ್ಲಿ ಊರಿಗೆ ಬಂದ ಮನೆ ಮಗನೂ, ಆಳು ಮಗನೂ ಒಟ್ಟಿಗೇ ಅಡಿಕೆ ಸುಲಿಯುತ್ತಿರುತ್ತಾರೆ. ಜಗದ ಸುದ್ದಿಗಳೆನ್ನಲ್ಲ ಹೇಳುತ್ತ, ಏನೇನೋ ಹರಟೆ ಹೊಡೆಯುತ್ತಿದ್ದರೂ ಕೈಗಳು ಮಾತ್ರ ಯಾಂತ್ರಿಕವಾಗಿ ರಾಶಿಯಿಂದ ಅಡಿಕೆ ಹೆಕ್ಕಿ ಸುಲಿದು, ಡಬ್ಬ ತುಂಬಿಸುವ ಆ ಚಾಕಚಕ್ಯತೆಯನ್ನ ನೋಡಲೆರಡು ಕಣ್ಣು ಸಾಲದು. ಸುಮ್ಮನೇ ತಮಾಷೆಗೆಂದೇನಾದರೂ ಅದನ್ನೇ ನಾವೂ ಮಾಡಿದರೆ ಕೈಗೆ ಬ್ಯಾಂಡೇಜು ತಪ್ಪದು.
ನೀನನಗಾದರೆ ನಾ ನಿನಗೆ ಎಂಬ ಕವಿವಾಣಿಯನ್ನು ಆಗಿ ತೋರಿಸುವ ಈ ಅಡಕೆ ಸುಲಿಯವ ಕಾರ್ಯಕ್ರಮ ಊರ ಒಗ್ಗಟನ್ನೂ, ಜನರ ಲವಲವಿಕೆ, ಹಾಸ್ಯ ಪ್ರಜ್ಞೆಗಳನ್ನೂ, ಆ ವರುಷದ ಬೆಳೆಯ ಸ್ಥಿತಿಯನ್ನೂ, ಬೆಳೆದಾತನ ಆರ್ಥಿಕ ಸ್ಥಿತಿಯನ್ನೂ, ಒಟ್ಟು ಸಮಷ್ಟಿಯ ಬದಲಾಗುತ್ತಿರುವ ಪರಿಸ್ಥಿತಿಯನ್ನೂ ಒಟ್ಟಿಗೇ ಹೇಳುತ್ತಿರುತ್ತದೆ! ಹೋದ ವರ್ಷ ಇದ್ದ ಹಾಡು ಹರಟೆಗಳು ಈ ವರ್ಷ ಇಲ್ಲ. ಈ ವರ್ಷದು, ಮುಂದಣವರ್ಷಕ್ಕಿಲ್ಲ. ಏಕೆಂದರೆ ವರುಷದಿಂದ ವರುಷಕ್ಕೆ ಅಡಿಕೆ ಸುಲಿಯುವವರು ಕಡಿಮೆಯಾಗುತ್ತಿದ್ದಾರೆ. ಮನೆ ಮಗನಿಗೆ ಊರಿಗೆ ಬರಲು ರಜೆ ಸಿಕ್ಕುವುದಿಲ್ಲ. ಸಿಕ್ಕಿದರೂ ಅಡಕೆ ಸುಲಿಯಲು ಹೊರಗೆ ಬಂದು ಕೂರಲೇ ಬೇಕೆಂದೂ ಇಲ್ಲ.  ಸಂಬಂಧಗಳು ಸಂಕುಚಿತವಾಗುತ್ತಿದ್ದ ಹಾಗೆ, ಬದುಕೂ ಸಂಕುಚಿತವಾಗುತ್ತದೆ.
ಬದಲಾವಣೆ ಎಂಬ ಜಗದ ನಿಯಮ ಅಂಗಳಕ್ಕೂ ಅಪ್ಲೈ ಆಗುತ್ತದೆ. ಸಗಣಿಯ ಅಂಗಳವನ್ನು ಇಂಟರ್ ಲಾಕುಗಳು ನಿಧಾನವಾಗಿ ಬಂಧಿಸುತ್ತಿವೆ. ಮಣ್ಣ ಪಾಗಾರವನ್ನು ಇಟ್ಟಿಗೆ ಸಿಮೆಂಟುಗಳು ತಿಂದು ಹಾಕಿವೆ. ಸ್ವಚ್ಛಂದ ಬೇರು ಬಿಟ್ಟ ಹೂ ಗಿಡಗಳಿಗೆ ಪಾಟುಗಳು ಬಂದಿವೆ. ಅಂಗಳದ ಹುಲಿ ದನದ ಆಟವು ಆಂಡ್ರಾಯ್ಡ್ ಪ್ಲೇ ಸ್ಟೋರುಗಳಲ್ಲಿ ಸಿಗುತ್ತಿರುವ, ನಗರ ತರಂಗಗಳು ಹಳ್ಳಿಗಳಲ್ಲೂ ಪ್ರತಿಧ್ವನಿಸುತ್ತಿರುವ ಈ ಕಾಲದಲ್ಲಿ ಅದೆಲ್ಲ ಎಷ್ಟರ ಮಟ್ಟಿಗಿನ ಮಾತು? ಅಪಾರ್ಟ್ ಮೆಂಟಿನ ಸಿಮೆಂಟಿನಂಗಳದ ಬ್ಯಾಡ್ಮಿಂಟನ್ನಿನ ಗಮ್ಮತ್ತು ಕಂಬಾಟದಲ್ಲಿರಬೇಕೆಂದೇನೂ ಇಲ್ಲವಲ್ಲ? ಮಣ್ಣಲ್ಲಾಡಿದ ಪೋರನೀಗ, ಗಾಳಿಯ ಜಾಗದಲ್ಲಿರುವ ೧೨ನೇ ಫ್ಲೋರಿನಲ್ಲಿನ ಮನೆಯ ಆರಡಿ ಉದ್ದದ ಪೋರ್ಟಿಕೋದಲ್ಲಿ ಕೂತು ಬಾಲ್ಯದ ಕಣ್ಣಮುಚ್ಚಾಲೆಯ ರೋಚಕ ಅನುಭವನನ್ನು ಕಥೆಯಾಗಿಸಿ ಮಕ್ಕಳಿಗೆ ಹೇಳುವ ಅನಿವಾರ್ಯದಲ್ಲಿರುವಾಗ ಏನನ್ನೋಣ?
ಹಳಹಳಿಕೆಗಳನ್ನು ಬಿಟ್ಟು ಯೋಚಿಸಿದರೆ , ಅಂಗಳಕ್ಕೆ ಅಕಾಲ ವೃದ್ಧಾಪ್ಯ ಬಂದಿರಬಹುದು, ಆದರೆ ಅದರ ಸೊಬಗು ಇನ್ನೂ ಮಾಸಿಲ್ಲ. ದೀಪಾವಳಿಯಂದು ತಿರುಗುವ ನೆಲ ಚಕ್ರಕ್ಕೆ ಸಿಮೆಂಟಿನಂಗಳದಲ್ಲಿ ಹೊಸ ವೇಗ ದಕ್ಕಿದೆ, ಮಳೆ ಬಂದಾಗ ಅಮ್ಮನೀಗ ತಗಡು ಚಪ್ಪರದ ಕೆಳಗೆ ತೋಯದೇ ನಡೆಯುತ್ತಾಳೆ. ಅಂಗಳದ ಕಳೆ ತೆಗೆದೂ ತೆಗೆದೂ ನಡು ಬಾಗಿದ್ದ ಅಜ್ಜನೀಗ ಕೋಲು ಹಿಡಿದು ನೆಟ್ಟಗಾಗಿದ್ದಾನೆ. ಏದುಸಿರು ಬಿಡುತ್ತ ಅಂಗಳ ಚಂದ ಕಾಣಬೇಕೆಂದು ಗುದ್ದಲಿ ಹಿಡಿದು ನೆಲ ಕೆತ್ತುತ್ತಿದ್ದ ಅಪ್ಪ, ಆರಾಮ ಕುರ್ಚಿಯಲ್ಲಿ ಕೂತಿದ್ದಾನೆ. ಅಂಗಳವನ್ನು ಬಂಧಿಸಿದ ಕಾಂಪೌಡು ವಾಲಿನ ಮೇಲೆ ಅಳಿಲು ಕೂತು ಬಿಸಿಲು ಕಾಯಿಸಿಕೊಳ್ಳುತ್ತಿದೆ. ಧೂಳು ಕೆಸರುಗಳು ಅದರಾಚೆಗೇ ಉಳಿದಿವೆ. ಹಬ್ಬಕ್ಕೆಂದು ಮನೆಯ ಸುತ್ತ ಹಚ್ಚಿದ ದೀಪಸಾಲುಗಳನ್ನ ಅಂಗಳವೂ ಮಸುಕಾಗಿ ಪ್ರತಿಫಲಿಸುತ್ತ ತಾನೂ ಪ್ರಜ್ವಲಿಸುತ್ತಿದೆ!


ವಿಜಯವಾಣಿ ದೀಪಾವಳಿ ವಿಶೇಷಾಂಕಕ್ಕೆ ಬರೆದ ಪ್ರಬಂಧ.

ಗುರುವಾರ, ಅಕ್ಟೋಬರ್ 30, 2014

ಅಪ್ಪನಾಗುವ ಕಷ್ಟ ಮತ್ತು ಸುಖ


ಆಸ್ಪತ್ರೆಯ ಕಾರಿಡಾರ್ ಖಾಲಿ ಹೊಡೆಯುತ್ತಿತ್ತು. ನಾನು  ವಾಚ್ ನೋಡಿಕೊಂಡರೆ ಕೊಂಚ ಹೊತ್ತಿಗೆ ಮುಂಚೆ ಎಷ್ಟು ಸಮಯವಾಗಿತ್ತೋ ಅಷ್ಟೇ!  ಅಲ್ಲಾ, ೨೦ ಸೆಕೆಂಡಿಗೊಮ್ಮೆ ಗಂಟೆ ನೋಡಿಕೊಂಡರೆ ಬಡಪಾಯಿ ವಾಚಾದರೂ ಏನು ಮಾಡೀತು? ಸುಮ್ಮನೆ ಯಾರ ಬಳಿಯಾದರೂ ಮಾತನಾಡೋಣ ಅನ್ನಿಸಿದರೂ ಊಹೂಂ, ಯಾರೂ ಇರಲಿಲ್ಲ. ಪ್ರಾಯಶಃ ನನ್ನ ಜೀವನದ ಅತ್ಯಂತ ಒತ್ತಡದ ಮತ್ತು ಸುದೀರ್ಘವೆನಿಸಿದ ಕ್ಷಣಗಳು ಅವು. ಖುಷಿಯ ಘಳಿಗೆಗಳಿಗೂ ಮೊದಲ ತಲ್ಲಣ, ಹೊಸ ಜೀವದ ಸ್ವಾಗತಕ್ಕೂ ಮೊದಲಿನ ಕ್ಷಣಗಣನೆ.
ಹೆಂಡತಿ ಒಳಗೆ ಹೆರಿಗೆ ಕೋಣೆಯಲ್ಲಿ, ನಾನು ಹೊರಗೆ ಕಾರಿಡಾರ್ ನಲ್ಲಿ. ಅದಾಗಲೇ ನೂರಾರು ಸಿನಿಮಾಗಳಲ್ಲಿ ದೃಶ್ಯವನ್ನು ನೋಡಿದ್ದೆ ನಾನು. ಗಂಡ ಹೊರಗೆ ನಿಂತಿದ್ದಾನೆ. ಪಕ್ಕದಲ್ಲಿ ಅಪ್ಪ ಅಮ್ಮ. ಮುಖದಲ್ಲಿ ಚಿಂತೆ. ಅತ್ತಿತ್ತ ಓಡಾಟ, ಗಡಿಯಾರದ ಮುಳ್ಳಿನ ಕ್ಲೋಸ್ ಅಪ್ ಶಾಟು. ಒಳಗೆ ಓಡೋ ನರ್ಸ್ ಕಡೆಗೆ ಯಾಚನಾ ಭಾವದಲ್ಲಿ ನೋಡುವ ಗಂಡನಿಗೆ ಅದೇನೋ ಸನ್ನೆ ಮಾಡಿ ಹೋಗುವ ಆಕೆ.. ಏನೂ ಆಗಲ್ಲ ಚಿಂತಿಸಬೇಡ ಎಂದು ಕಣ್ಣಲ್ಲೇ ಹೇಳೋ ಅಮ್ಮ.. ಪ್ರತಿ ಬಾರಿ ನೋಡುವಾಗಲೂ, ಅಲ್ಲಾ ಸೀನನ್ನು ಇಷ್ಟೊಂದು ವೈಭವೀಕರಿಸಿ ತೋರಿಸೋ ಅಗತ್ಯ ಏನಿದೆ, ಒಳಗೆ ಡಾಕ್ಟರುಗಳಿರುತ್ತಾರೆ, ನರ್ಸ್ಗಳಿದ್ದಾರೆ, ತಂತ್ರಜ್ಞಾನ ಅದೆಷ್ಟು ಮುಂದುವರಿದಿದೆ, ಯಾವ ತಲೆಬಿಸಿಯೂ ಇಲ್ಲದೇ ಹೆರಿಗೆ ಆಗೋದು ಗ್ಯಾರೆಂಟಿ, ಅಷ್ಟಾದರೂ ಇನ್ನೂ ಹಳೇ ಸಿನಿಮಾದ ಮೆಲೋಡ್ರಾಮಾ ಬಿಟ್ಟಿಲ್ಲವಲ್ಲ  ಅಂದುಕೊಳ್ಳುತ್ತಿದ್ದೆ. ಆದರೆ ಯಾವಾಗ ನಾನು ಖಾಲಿ ಕಾರಿಡಾರಿನ ಮೌನದಲ್ಲಿ, ಸೌಂಡ್ ಪ್ರೂಫಾಗಿದ್ದರೂ ಬಾಗಿಲಿನ ಸಂದುಗಳಲ್ಲಿ ತೂರಿಬರುತ್ತಿದ್ದ ಆಕ್ರಂದನವನ್ನು ಕೇಳುತ್ತ ನಿಂತಿದ್ದೆನೋ, ಯಾವಾಗ ನನ್ನ ಕಾಲುಗಳಲ್ಲೂ ಸಣ್ಣಗೆ ನಡುಕ ಉಂಟಾಗಿ ಇದೆಲ್ಲ ಬೇಗ ಮುಗಿದು ಹೋಗಬಾರದೇ ಎನ್ನಿಸಿತೋ, ಆವಾಗ ಸಂದರ್ಭದ ಗಂಭೀರತೆ ಅರ್ಥವಾಯಿತು.
ನಾನು ಏನಾಗಿದ್ದೇನೆ ಎಂಬುದೇ ನನಗರ್ಥವಾಗದೇ ನಿಂತಿದ್ದ ಹೊತ್ತಿಗೆ, ನನ್ನೆದುರಿನ ಆಪರೇಶನ್ ಥಿಯೇಟರ್ ಬಾಗಿಲು ತೆರೆಯಿತು. ನನ್ನ ಬಾಳಿನ ಹೊಸ ಅರ್ಥವನ್ನು ಕೈಯಲ್ಲಿ ಹೊತ್ತು ನಿಂತಿದ್ದ ನರ್ಸಮ್ಮ, ನಕ್ಕುಹೆಣ್ಣುಮಗುಎಂದು ಮೃದುಬಟ್ಟೆಯಲ್ಲಿ ಸುತ್ತಿದ್ದ ಎಳೇ ಕಂದಮ್ಮನನ್ನು ಕೈಗಿತ್ತಳು. ೨೫ ಕೇಜಿ ತೂಕ ಹೊತ್ತಾಗಲೂ ನಡುಗದ ಕೈ, ಈಗ ನಡುಗುತ್ತಿತ್ತು. ಜಗದ ಬೆಳಕಿಗಂಜಿ ಮುಚ್ಚಿಕೊಂಡಿರುವ ಪುಟ್ಟ ಕಣ್ಣುಗಳು, ಗಾಳಿಯನ್ನೇ ಗಟ್ಟಿ ಹಿಡಿದಿರುವ ಬಿಗಿಮುಷ್ಟಿಗಳು.. ಹಾಗೇ ನೋಡುತ್ತ ನಿಂತ ನನಗೆ ಒಂದು ನಿಮಿಷ ಏನಾಗುತ್ತಿದೆ ಎಂದೇ ತಿಳಿಯಲಿಲ್ಲ. ಆನಂದವೋ, ರೋಮಾಂಚನವೋ, ಭಾವೋದ್ವೇಗವೋ.. ಊಹೂಂ.. ಎಲ್ಲ ಖಾಲಿ ಖಾಲಿ. ಮಗಳ ಮುಖವನ್ನೇ ನೋಡಿ ನೀಳ ಉಸಿರು ಹೊರ ಬಿಟ್ಟ ಮೇಲೆ ನಿಧಾನವಾಗಿ, ಖಾಲಿಯಾದ ನನ್ನ ಒಳಗೆಲ್ಲ ತುಂಬತೊಡಗಿತು. ಆವತ್ತಿನಿಂದ ತುಂಬಿಕೊಳ್ಳುತ್ತಿರುವ ನನ್ನ ಖಾಲೀತನ ಇನ್ನೂ ತುಂಬಿಕೊಳ್ಳುತ್ತಲೇ ಇದೆ!
ಅಪ್ಪ ಅನ್ನಿಸಿಕೊಂಡ ಘಳಿಗೆ ಅರ್ಥವಾದ ಮಹತ್ವದ ಸತ್ಯ ಏನಂದರೆ ಅದು ಬರಿಯ ನಾಮಪದವಲ್ಲ ಕ್ರಿಯಾಪದ ಅಂತ! ಹೆಂಗಸರಿಗೆ ಸೂಕ್ಷ್ಮ ಅನ್ನುವುದು ಹುಟ್ಟುತ್ತಲೇ ದಕ್ಕಿಬಿಟ್ಟಿರುತ್ತದೆ, ನಾವುಗಳೋ ಅದನ್ನು ಒಲಿಸಿಕೊಳ್ಳಬೇಕು. ಮಗಳು ಹುಟ್ಟಿದ ದಿನವೇ ನನ್ನ ಹೆಂಡತಿ ಅಪಾರ ಜ್ಞಾನವಿರುವವಳಂತೆ ಅದನ್ನು ನೋಡಿಕೊಳ್ಳುತ್ತಿರುವುದನ್ನ ನೋಡಿ ನಾನಂತೂ ಕಂಲಾಗಾಗಿ ಹೋಗಿದ್ದೆ. ಹೀಗೆ ಹೀಗೇ ಎತ್ತಿಕೊಳ್ಳಬೇಕು, ಕುತ್ತಿಗೆ ಹಿಡಿದುಕೋ.. ಛೇ.. ಹಾಗಲ್ಲ ಹೀಗೆ ಎಂದು ಅವಳು ನನಗೆ ವಿವರಿಸಬೇಕಿದ್ದರೆ ನಾನು ಪೆದ್ದು ಪೆದ್ದಾಗಿ ತಲೆಯಾಡಿಸುತ್ತಿದ್ದೆ. ಹಾಲು ಕುಡಿದದ್ದು ಹೆಚ್ಚಾಯ್ತು, ಈಗ ವಾಂತಿಯಾಗುತ್ತದೆ ಎಂದು ಅವಳು ಹೇಳಿದರೆ ಮಾತು ಮುಗಿಯುವುದರೊಳಗೆ ಹಾಗೇ ಆಗಬೇಕೆ. ಇದೆಲ್ಲ ಹೇಗೆ ತಿಳಿಯುವುದಪ್ಪ ಎಂದು ನಾನು ಅರ್ಥವಾಗದೆ ನೋಡುತ್ತಿದ್ದೆ.ನಮ್ಮತ್ತೆ ಮತ್ತು ಇವಳು ಇಬ್ಬರೂ ಸೇರಿ ಹಸುಳೆಯ ಆರೈಕೆ ಮಾಡುತ್ತಿದ್ದರೆ ನಾನು ಬಿಟ್ಟಕಣ್ಣು ಬಿಟ್ಟುಕೊಂಡು ನೋಡುತ್ತಿದ್ದೆ ಅಷ್ಟೆ. ನಾನೇನಾದರೂ ಸಹಾಯ ಮಾಡಬೇಕೇ ಎಂದು ಕೇಳಿದ ವಿನಂತಿಯನ್ನು ನನ್ನವಳು ಗೌರವ ಪೂರ್ವಕವಾಗಿ ಸ್ವೀಕರಿಸಿ, ಸಾರಾಸಗಟಾಗಿ ತಿರಸ್ಕರಿಸಿದ್ದಳು. ದಯಾಪರರಾದ ಅವರುಗಳು ಡಯಾಪರು ಸೊಳ್ಳೆಪರದೆ ಇತ್ಯಾದಿಗಳನ್ನು ತರುವ ಕೆಲಸವನ್ನು ನನಗೆ ವಹಿಸಿ ಇತರ ಸಂಕಷ್ಟಗಳಿಂದ ನನ್ನನ್ನು ಪಾರು ಮಾಡಿದ್ದರು.
ಆಸ್ಪತ್ರೆಯ ಅಧ್ಯಾಯ ಮುಗಿದು ಬಾಣಂತನದ ಸಂಭ್ರಮಗಳು ಶುರುವಾಗುವ ಹೊತ್ತಿಗೆ ನಾನೂ ಸ್ವಲ್ಪ ಪರಿಶ್ರಮ ಹಾಕಿ, ಅನುಭವ ಪಡೆದುಕೊಂಡಿದ್ದೆ. ಮಗಳನ್ನು ಎತ್ತಾಡಿಸುವ ಕಲೆ ನನಗೂ ಅರ್ಥವಾಗಿತ್ತು. ಬೊಚ್ಚುಬಾಯಿ ಅಗಲಿಸಿ ಹಾಹೂ ಅನ್ನುತ್ತಿದ್ದ ಮಗಳಿಗೆ ಅಪ್ಪನೆಂಬ ಜೀವಿಯ ಪರಿಚಯ ನಿಧಾನವಾಗಿ ಆಗುತ್ತಿತ್ತು. ಇಷ್ಟಾದರೂ ನಾನು ಮಗಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಇನ್ನೂ ಪ್ರೈಮರಿಯನ್ನೂ ಪಾಸಾಗಿರಲಿಲ್ಲ. ಯಾಕೆಂದರೆ ಬಹಳಷ್ಟು ವಿಚಾರಗಳನ್ನ ನನಗೆ ನೋಡಲೇ ಆಗುತ್ತಿರಲಿಲ್ಲ, ಇನ್ನು ಮಾಡುವುದು ಆಮೇಲಿನ ಮಾತು.
ಪಾಪೂಗೆ ಸ್ನಾನ ಮಾಡಿಸುವುದು ಎಂಬ ಘನಘೋರ ಕಾರ್ಯವನ್ನು ನನಗಂತೂ ಕಣ್ಣಲ್ಲಿ ಕಾಣಲೇ ಸಾಧ್ಯವಾಗುತ್ತಿರಲಿಲ್ಲ.! ಸ್ನಾನ ಮಾಡಿಸಲೆಂದೇ ವಿಶೇಷ ಪರಿಣತಿಯನ್ನು ಪಡೆದ ಕೊಲ್ಲೂರಿಯೆಂಬ ಅಜ್ಜಿಯು ಬಿಸಿಬಿಸಿ ನೀರನ್ನು ತೊಪತೊಪನೆ ಹೊಯ್ಯುತ್ತಿದ್ದರೆ ಮಗಳು ಹಂಚು ಹಾರಿ ಹೋಗುವಂತೆ ಅಳುತ್ತಿದ್ದಳು. ಅವಳು ಹುಚ್ಚಾಪಟ್ಟೆ ಅಳುತ್ತಿದ್ದರೂ ಹಾಗೊಂದು ಕ್ರಿಯೆಯೇ ನಡೆಯುತ್ತಿಲ್ಲ ಎಂಬಂತೆ ಆಕೆಯೂ ನನ್ನತ್ತೆಯೂ ಅದೇನೋ ಊರಿನ ಸುಖಕಷ್ಟಗಳನ್ನೆಲ್ಲ ಮಾತನಾಡುತ್ತಿದ್ದರು. ಅದ್ಯಾರೋ ಪುಣ್ಯಾತ್ಮ ಇನ್ನಾರಿಗೋ ಬಾರಿಸಿದನಂತೆ, ಅಲ್ಲಾ ಜಗತ್ತಲ್ಲಿ ಹಾಗಾದರೆ ಕರುಣೆಯೇ ಇಲ್ಲವೇ? ಎಲ್ಲ ಏನಾಗ್ತಾ ಇದೆ ಎಂದು ಮರುಗುತ್ತ ಕೂಸಿನ ತಲೆ ಕಾಲು ಹೊಟ್ಟೆ ಬೆನ್ನಿಗೆ ಇನ್ನಷ್ಟು ನೀರು ಸುರಿಯುತ್ತ ಕಾಲ ಮೇಲೆಯೇ ಮಲಗಿಸಿಕೊಂಡು ಅದೇನೇನೋ ಕವಾಯತುಗಳನ್ನ ಮಾಡಿಸುತ್ತಿದ್ದರು. ಕರುಣೆ ಬಚ್ಚಲಮನೆಯ ಬಿಸಿನೀರ ರೂಪದಲ್ಲಿ ಹರಿದು ಮೋರಿ ಸೇರುತ್ತಿತ್ತು. ನಾನು ಸ್ನಾನ ಮಾಡಿಸುವಾಗ ಒಂದೆರಡು ದಿನ ಇದನ್ನೆಲ್ಲ ನಿಂತು ನೋಡಿ ಹೌಹಾರಿ ಮುಖವನ್ನು ಚಿತ್ರವಿಚಿತ್ರವಾಗಿಸಿಕೊಂಡು ಅಯ್ಯೋ ಅಪ್ಪಾ ಸ್ವಲ್ಪ ನೋಡ್ಕಂಡು ನೀರು ಹುಯ್ರೇ ಎಂದಿದ್ದಕ್ಕೆ ಮಾರನೇ ದಿನದಿಂದ ನನ್ನ ಪಾಲಿಗೆ ಬಚ್ಚಲು ಬ್ಯಾನ್ ಆಯಿತು. ಪ್ಯಾಟೆ ಸೇರ್ಕಂಡ್ರೆ ಹೀಗೆ ಅಮ್ಮ, ಎಲ್ಲದಕ್ಕೂ ಹುಡುಗ್ರು ಅತಿ ಆಡ್ತವೆ ಅಂತ ಕೆಲಸದ ಕೊಲ್ಲೂರಿಯೂ ಷರಾ ಬರೆದಳು. ಹಾಗೆಂದು ನಾನು ಮಾಡಿಕೊಂಡ ವಿಡಿಯೋ ತೋರಿಸೆಂದು ಕೇಳಲು ಮರೆಯಲಿಲ್ಲ!
ಸ್ನಾನ ಮಾಡಿಕೊಂಡು ಒಳಗೆ ಬರುವಾಗ ಪುಟ್ಟ ಹಬೆಯ ದೇವತೆಯಂತೆ ಕಾಣುತ್ತಿದ್ದ ಮಗಳು ಕೊಲ್ಲೂರಿಯ ಬಿಸಿ ನೀರಿನ ಹೊಡೆತಕ್ಕೆ ಕಂಗಾಲಾಗಿ ಬಸವಳಿದು ಹೋಗಿರುತ್ತಿದ್ದಳು. ಪೌಡರು ಹಾಕಿ ಗೊಬ್ಬೆ ಕಟ್ಟುವುದರೊಳಗೆ ನಿದ್ದೆ ಗ್ಯಾರೆಂಟಿ. ಹಾಗೆಲ್ಲ ಸುಮ್ಮ ಸುಮ್ಮನೆ ನಿದ್ರೆ ಮಾಡಿಸುವ ಹಾಗೆಲ್ಲ ಇಲ್ಲ! ತೊಟ್ಟಿಲನ್ನು ತೂಗಲೂ ಒಂದು ಕ್ರಮ, ಮಲಗಿಸಲೂ ಒಂದು ಶಿಸ್ತು, ಸ್ನಾನವಾದ ಮೇಲಿನ ನಿದ್ದೆಗೆ ಒಂದು ರೀತಿಯ ವ್ಯವಸ್ಥೆ, ಮಧ್ಯಾಹ್ನಕ್ಕಾದರೆ ಇನ್ನೊಂದು, ರಾತ್ರಿಗೆ ಮಗದೊಂದು. ಅಬ್ಬಬ್ಬ! ಒಂದು ಪಂಚೆಯನ್ನೇ ಹೇಗೆಲ್ಲ ಆ ಕೂಸಿಗೆ ಸುತ್ತುತ್ತಿದ್ದರು ಎಂದರೆ ನಾನು ಹೊತ್ತಿಗೆಲ್ಲ  ಹೆಚ್ಚು ಮಾತನಾಡದೆಫೋಟೋ ತೆಗೆಯುವುದುಎಂಬ ಅತ್ಯಂತ ಮುಖ್ಯ ಕಾರ್ಯ ಮಾಡುತ್ತಿದ್ದೆ. ಸಹಾಯ ಮಾಡಲಾ ಎಂದು ಕೇಳಿ, ಅತ್ತೆಯೋ ಹೆಂಡತಿಯೋ ಹುಂ ಅಂದರೆ ಎಂಬ ಹೆದರಿಕೆ!
ಇನ್ನು ಮಗುವನ್ನು ನೋಡಲು ಬರುವ ಮಹನೀಯರುಗಳ ಬಗ್ಗೆ ಹೇಳ ಹೊರಟರೆ ಅದೇ ಬೇರೆಯ ಪ್ರಬಂಧವಾಗುತ್ತದೆ. ಅಪ್ಪನಿಗೋ ಅಮ್ಮನಿಗೋ ಅಜ್ಜಿ ಅಜ್ಜನಿಗೋ ಮಗುವನ್ನು ಹೋಲಿಸಬೇಕಾಗಿರುವುದು ಅತ್ಯಂತ ಅನಿವಾರ್ಯವೂ ಅವಶ್ಯವೂ ಆಗಿರುವ ಪ್ರಕ್ರಿಯೆ ಎಂದು ನೂರಕ್ಕೆ ನೂರು ಪ್ರತಿಶತ ಜನರೂ ಭಾವಿಸಿದ್ದಾರೆ. ಕೆಲವರು ಇನ್ನೂ ಮುಂದೆ ಹೋಗಿ ಕಣ್ಣು  ಇವನ ಹಾಗೆ ಮೂಗು ಅವಳದು.. ಆದರೆ ನೋಡಲು ಥೇಟು ಅಜ್ಜಿಯ ಥರ ಎಂದು ಯಥಾ ಸಾಧ್ಯ ಕುಟುಂಬಸ್ಥರನ್ನು ಓಲೈಸುವ ಕಾರ್ಯವನ್ನೂ ಮಾಡುತ್ತಾರೆ. ನಾನು ಮೊದ ಮೊದಲು ತಲೆಯಾಡಿಸಿ ಭಾರೀ ಉತ್ಸಾಹದಿಂದ ಪ್ರತಿಕ್ರಿಯೆ ನೀಡಿದೆ. ಅದು ಅತ್ಯಂತ ಅಪಾಯಕಾರಿ ಅನ್ನುವುದು ಆಮೇಲಾಲಾಮೇಲೆ ಅರಿವಾಯಿತು. ಕಾಲು ನೋಡು ಇವನ ಅಜ್ಜನೂ ಹೀಗೇ ಇದ್ದ, ಕೈ ನೋಡು ಅಜ್ಜಿಯ ಥರವೇ ಎಂದೆಲ್ಲ ಇನ್ನೂ ಗಂಭೀರವಾಗಿ ಡಿ-ಕೋಡ್ ಮಾಡಲು ಶುರು ಮಾಡಿದ ಮೇಲೆ ನಾನೂ ಸುಮ್ಮನಾಗಬೇಕಾಯಿತು. ಏಕೆಂದರೆ ಬಂದ ಎಲ್ಲರ ಬಳಿಯೂ ನಕ್ಕು, ಕೃತಜ್ಞತೆಯನ್ನು ವ್ಯಕ್ತಪಡಿಸಬೇಕಾದ ಭಾರ ನಮ್ಮ ಮೇಲಿರುವುದರಿಂದ ಯಾವ ವ್ಯಂಗ್ಯ ಉಡಾಫೆಗಳಿಗೂ ಅವಕಾಶ ಇರುವುದಿಲ್ಲ. ಯಾರೋ ಸ್ನೇಹಿತ ದಂಪತಿ ಬಂದಿದ್ದರು, ಅವರವರೇ ಯಾರ ಹಾಗೆ ಕಾಣುತ್ತಿದೆ ಎಂದು ಮಾತನಾಡಿಕೊಂಡರು. ಸ್ನೇಹಿತನ ಮಾತಿಗೆ ನಾನು ಸುಮ್ಮನೇ ತಲೆಯಾಡಿಸಿ ಹೌದು ಹೌದು ನನಗೂ ಹಂಗೇ ಅನ್ನಿಸ್ತು ಎಂದೆ. ಅವನು ತಿರುಗಿ ಹೆಂಡತಿಯ ಬಳಿ ನೋಡಿದ್ಯಾ ನಾನು ಹೇಳಿದ್ದೇ ಕರೆಕ್ಟು ಎಂದು ಮತ್ತೆ ವಾದಕ್ಕೆ ತೊಡಗಿದ. ನಿದ್ದೆಯಲ್ಲಿದ್ದ ಕೂಸು ವಿನಾಕಾರಣ ನಕ್ಕಿತು.
ಬಾಣಂತನ ಮುಗಿಸಿದ ಹೆಂಡತಿಯನ್ನು ಮರಳಿ ಬೆಂಗಳೂರಿಗೆ ಕರೆದೊಯ್ಯಲು ಬಂದೆ. ಹೊತ್ತಿನಲ್ಲಿ ನಡೆದ ಸಲಹಾಪರ್ವ ಎಂಬ ಅಮೋಘ ಸಂದರ್ಭದ ಬಗ್ಗೆ ಏನು ಹೇಳಲಿ? ಊರಿನ ಹಿತೈಷಿಗಳೂ, ಬಂಧು ಬಾಂಧವರೂ ಬಂದು ಬೆಳಗಿನಿಂದಲೇ ಥರಹೇವಾರಿ ಸಲಹೆಗಳನ್ನು ನನ್ನವಳಿಗೆ ನೀಡಲು ಆರಂಭಿಸಿದ್ದರು. ಮಗಳಿಗೆ ಕ್ಯಾರೆಟ್ಟು ತಿನ್ನಿಸಬೇಡ ಕಣ್ಣಿನ ತೊಂದರೆ ಬರತ್ತೆ, ಎಮ್ಮೆ ಹಾಲು ಕುಡಿಸಬೇಡ ಬುದ್ದಿ ಮಂದ, ಅಪ್ಪಿತಪ್ಪಿಯೂ ಪ್ಯಾಕೇಟು ಮೊಸರು ತಿನ್ನಿಸಬೇಡ ಅದ್ರಲ್ಲಿ ಬರೀ ಕೆಮಿಕಲ್ಲು, ಬಾಳೆಹಣ್ಣು ಥಂಡಿ ದಾಳಿಂಬೆ ಹೀಟು ಮೂಸಂಬಿ ನೆಗಡಿ.. ಆಚೆ ಮನೆ ಕುಸುಮಕ್ಕ ಹೇಳಿದ್ದು ಈಚೆಮನೆ ಚಿಕ್ಕಮ್ಮನ ಪ್ರಕಾರ ತಪ್ಪು. ರಾಮಣ್ಣ ಬೇಡ ಎಂದ ಯಾವುದೋ ಹಣ್ಣು, ಲಕ್ಷ್ಮಜ್ಜಿಯ ಪ್ರಕಾರ ತಿನ್ನಲೇಬೇಕು. ಸಂಜೆ ಆಗುವ ಹೊತ್ತಿಗೆ ನನ್ನ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿಯೇ ಬಿಟ್ಟಿತ್ತು. ನನ್ನ ಹೆಂಡತಿ ಈಗಾಗಲೇ ಹಲವು ತಿಂಗಳುಗಳ ಕಾಲ ಇದನ್ನೆಲ್ಲ ಕೇಳಿದ್ದರಿಂದ ಸ್ಥಿತಪ್ರಜ್ಞಳಾಗಿ ಹುಂ ಅನ್ನುತ್ತಿದ್ದಳು. ಅವಳ ಧೈರ್ಯ ನೀಡಿದ ಮೇಲೆಯೇ ನನಗೆ ನಮ್ಮ ಮಗಳು ಉಪವಾಸ ಇರಬೇಕಾಗಿಲ್ಲ ಎಂದು ಖಾತ್ರಿಯಾಯಿತು!
ನಾಲ್ಕಿದ್ದ ಹೆಜ್ಜೆ ಆರಾಗಿ ಬೆಂಗಳೂರಿನಲ್ಲಿ ಮೂಡಿದ ಮೇಲೆ, ಕಾಲ ಸಾಗುವ ಪರಿಯನ್ನು ಕಂಡು ನನಗೇ ಅಚ್ಚರಿಯಾಯಿತು. ಅಂಬೆಗಾಲಿನಿಂದ ಪುಟ್ಟಪುಟ್ಟ ಹೆಜ್ಜೆಗಳನ್ನ ಇಡುತ್ತ ತೊದಲು ಮಾತನಾಡುತ್ತ ಸಾಗುವ ಮಗಳ ಹಿಂದೆ ನಾವೂ ಓಡುತ್ತ ಅದು ಹೇಗೆ ವರುಷ ಕಳೆದು ಮುಂದೆ ಸಾಗಿತೋ ಗೊತ್ತೇ ಆಗಲಿಲ್ಲ. ಆದರೆ ಇಲ್ಲಿಗೆ ಬಂದ ಮೇಲೆ ಬೇರೆಯದೇ ಬಗೆಯ ಚಾಲೆಂಜುಗಳು. ಮಗಳು ಪಾಪ, ನಾಲ್ಕು ಗೋಡೆಗಳ ಮಧ್ಯವೇ ದಿನದ ಹೆಚ್ಚಿನಂಶವನ್ನು ಕಳೆಯಬೇಕು, ಬೇಕೋ ಬೇಡವೋ, ಡಾಕ್ಟರುಗಳು ಹೇಳುವ ಅದೆಂಥದೋ ಇಂಜೆಕ್ಷನ್ನುಗಳನ್ನ ಮಾತ್ರೆಗಳನ್ನ ಕೊಡಿಸಬೇಕು.. ಆಕೆ ಹನೀಸಿಂಗನ ಲುಂಗಿ ಡ್ಯಾನ್ಸಿಗೆ ಮೆಲ್ಲನೆ ಕೈ ಎತ್ತಿ ಕಾಲು ಕುಣಿಸಿದರೆ ಅದನ್ನ ಸಾಧನೆ ಎಂದು ಖುಷಿ ಪಡಬೇಕೋ, ಅಥವಾ ಇಷ್ಟು ಬೇಗನೆ ಇದೆಲ್ಲ ಅಭ್ಯಾಸವಾಯಿತಲ್ಲ ಎಂದು ಬೇಸರಿಸಬೇಕೋ? ತಿಳಿಯುತ್ತಿಲ್ಲ!
 ಒಟ್ಟಿನಲ್ಲಿ ಹೊಸ ಹೊಸ ಪಾಠಗಳನ್ನ ಕಲಿಯುತ್ತ ಅಪ್ಪನೆಂಬ ಪದವಿಯ ಮೆಟ್ಟಿಲುಗಳನ್ನೇರುತ್ತಿದ್ದೇನೆ. ನರ್ಸು ನನ್ನ ಕೈ ಮೇಲೆ ಮಗುವನ್ನು ಇಟ್ಟದ್ದು ಇನ್ನೂ ಈಗತಾನೇ ನಡೆದಂತಿದೆ. ಆದರೆ ಮಗಳು ಹುಟ್ಟಿ ಆಗಲೇ ಒಂದೂವರೆ ವರ್ಷವಾಗುತ್ತಿದೆ. ಮೊನ್ನೆ ತಾನೇ ಹಗುರ ಹೆಜ್ಜೆಗಳನ್ನು ಹಾಕುತ್ತ ನಡೆಯುವ ಅವಳನ್ನ ಕರೆದುಕೊಂಡು ವಾಕಿಂಗ್ ಗೆ ಹೋಗಿದ್ದೆ. ನಾನು ಎರಡೆರಡು ಅಕ್ಷರದ ಏನೇನೋ ಶಬ್ದಗಳನ್ನ ಹೇಳಿಕೊಡುತ್ತ ನಡೆಸಿಕೊಂಡು ಹೊರಟಿದ್ದೆ. ಅವಳೂ ಅವಳ ಬಾಲ ಭಾಷೆಯಲ್ಲಿ ಅದೇನೋ ಹೇಳುತ್ತಿದ್ದಳು. ಹಾಗೇ ಹೋಗುತ್ತಿದ್ದಾಗ, ಯಾವುದೋ ಕ್ಷಣದಲ್ಲಿ ನನಗೇ ಗೊತ್ತಿಲ್ಲದ ಹಾಗೆ ನನ್ನ ಕೈ ಬಿಡಿಸಿಕೊಂಡು ಓಡಿಯೇ ಬಿಟ್ಟಳು. ಹೇ ಎಂದು ಮುಂದಡಿಯಿಟ್ಟೆ.. ಆಕೆ ನಾಲ್ಕೆಂಟು ಹೆಜ್ಜೆ ಓಡಿದವಳು ಅಲ್ಲೇ ನಿಂತು, ತಿರುಗಿ ನನ್ನನ್ನು ನೋಡಿ ನಕ್ಕು.. ಕೈ ಚಾಚಿ   ’ಅಪಾ ಬಾಎಂದು ಕರೆದಳು! ನಾನು ನೋಡುತ್ತ ನಿಂತೆ..

-ಕನ್ನಡಪ್ರಭ ದೀಪಾವಳಿ ಲಲಿತ ಪ್ರಬಂಧ ಸ್ಪರ್ಧೆ -2014 ರಲ್ಲಿ ದ್ವಿತೀಯ ಬಹುಮಾನ